ಆದಾಯ ತೆರಿಗೆ ಆಯುಕ್ತರ ಕಚೇರಿ ಸ್ಥಳಾಂತರ; ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಶಾಸಕ ಕಾಮತ್ – ಜೆ ಆರ್ ಲೋಬೊ
ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯು ಗೋವಾಕ್ಕೆ ಸ್ಥಳಾಂತರಗೊಳ್ಳುವುದಿಲ್ಲ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಇದು ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಕೃತ್ಯವಾಗಿದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೊ ಹೇಳೀದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವು ಮಾಜಿ ಶಾಸಕ ಜೆ ಆರ್ ಲೋಬೊ ಅವರು ಶಾಸಕರು ಪತ್ರಿಕೆಯಲ್ಲಿ, ಮಂಗಳೂರಿನಲ್ಲಿ ಮುಖ್ಯ ಆಯುಕ್ತರ ಕಚೇರಿಯು ಅದರ ಜೊತೆಗೆ ಗೋವಾದಲ್ಲಿ ಮುಖ್ಯ ಆಯುಕ್ತರ ಕಚೇರಿ ಇದೆ ಎಂಬ ಹೇಳಿಕೆಯನ್ನು ನೀಡಿರುತ್ತಾರೆ. ಆದ್ದರಿಂದ ಮಂಗಳೂರಿನಲ್ಲಿರುವ ಮುಖ್ಯ ಆಯುಕ್ತರ ಕಚೇರಿಯು ಗೋವಾಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಮುಖ್ಯ ಆಯುಕ್ತರ ಕಚೇರಿ ಗೋವಾಕ್ಕೆ ವರ್ಗಾವಣೆಯಾದರೆ ಆ ಕಚೇರಿಗಳ ಅಧಿಕಾರಿಗಳು ವರ್ಗಾವಣೆಯಾಗುವುದು ಸಹಜ. ಇದು ಎಲ್ಲರಿಗೂ ಗೊತ್ತಿರುವ ವಿಚಾರ.
ಈ ಹಿಂದೆ ಮಂಗಳೂರಿನಲ್ಲಿ ಸ್ಥಾಪಿತವಾದ ಬ್ಯಾಂಕ್ ಗಳನ್ನು ನಷ್ಟದಲ್ಲಿರುವ ಬ್ಯಾಂಕಿನ ಜೊತೆಯಲ್ಲಿ ವಿಲೀನಗೊಳಿಸಿರುವ ಸಂದರ್ಭದಲ್ಲಿ ಶಾಸಕರು ತುಟಿಪಿಟಿಕ್ ಎತ್ತಿಲ್ಲ. ಕೆಲವೊಂದು ಆಡಳಿತ ಕಚೇರಿಯು ಬೆಂಗಳೂರಿಗೆ ವರ್ಗಾವಣೆಯಾದಾಗ ತೆಪ್ಪಗಿದ್ದ ಶಾಸಕರು ಈಗ ಆದಾಯ ತೆರರಿಗೆ ಮುಖ್ಯ ಆಯುಕ್ತರ ಕಚೇರಿ ಗೋವಾಗೆ ಸ್ಥಳಾಂತರವಾಗುವ ಸಂದರ್ಭದಲ್ಲಿ ವಿಭಿನ್ನ ಹೇಳಿಕೆ ನೀಡುತ್ತಿದ್ದರು. ಬಹುಶಃ ಸ್ಥಳೀಯ ಶಾಸಕರಿಗೆ ಸರ್ಕಾರದ ಆದೇಶ ಅರ್ಥವಾಗುತ್ತಿಲ್ಲವೋ ಅಥವಾ ಜನರನ್ನು ಹಾದಿ ತಪ್ಪಿಸಲು ಸುಳ್ಳು ಹೇಳುತ್ತಿದ್ದಾರೆ ಎಂಬ ಸಂಶಯ ಕಾಡುತ್ತಿದೆ. ಈ ಹಿಂದೆ ಬಿಜೆಪಿ ಮಂಗಳೂರಿನಲ್ಲಿರುವ ಕಸ್ಟಮ್ ಮುಖ್ಯ ಆಯುಕ್ತರ ಕಚೇರಿಯು ಮೈಸೂರಿಗೆ ಸ್ಥಳಾಂತರಗೊಂಡಿದೆ. ಈಗ ಆದಾಯ ತೆರಿಗೆಯ ಮುಖ್ಯ ಆಯುಕ್ತರ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಗೊಳಿಸಿ ತೆರಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿದೆ.
ತೆರಿಗೆದಾರರಿಗೆ ಏನಾದರೂ ಸಮಸ್ಯೆ ಬಂದಾಗ ಅದರ ಬಗ್ಗೆ ಮನವಿ ಮಾಡುವ ಸಂದರ್ಭದಲ್ಲಿ ಅವರು ಗೋವಾಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಜನರು ತೊಂದರೆ ಅನುಭವಿಸಬಹುದಾದ ಪರಿಸ್ಥಿತಿ ಎದುರಾಗಬಹುದು. ಈ ಬಗ್ಗೆ ಎಲ್ಲರೂ ರಾಜಕೀಯ ಬಿಟ್ಟು ಮುಖ್ಯ ಕಚೇರಿಯು ಮಂಗಳೂರಿನಲ್ಲಿ ಉಳಿಯುವಂತೆ ಪ್ರಯತ್ನ ಮಾಡಬೇಕು ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.