ಆದ್ಯತಾ ಪಟ್ಟಿ ಆಧರಿಸಿ ಭೂಮಿ ಹಂಚಿಕೆಗೆ ಕ್ರಮ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು: ಡಿಸಿ ಮನ್ನಾ ಭೂಮಿಯನ್ನು ಆದ್ಯತಾ ಪಟ್ಟಿಯನ್ನಿರಿಸಿಕೊಂಡು ಸಮಗ್ರವಾಗಿ ಮಾನದಂಡಗಳನ್ನು ರಚಿಸಿ ಗುರುತಿಸಿಟ್ಟಿರುವ ಜಾಗವನ್ನು ನೀಡಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮುಖಂಡರ ಕುಂದುಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪರಿಶಿಷ್ಟ ಜಾತಿ ಮತು ಪಂಗಡದವರಿಗಾಗಿ ಗುರುತಿಸಿ ಮೀಸಲಿರಿಸಿದ ಭೂಮಿ ಅರ್ಜಿ ಸಲ್ಲಿಸಿದರವರಿಗೆಲ್ಲರಿಗೂ ನೀಡಲು ಸಾಲುತ್ತಿಲ್ಲ; ಹಾಗಾಗಿ ಸಮಗ್ರ ಮಾನದಂಡವನ್ನು ರೂಪಿಸಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ತಲೆಮಾರುಗಳಿಂದ ಇರುವ ಆಸ್ತಿಗೆ ಖಾತಾ ಮಾಡಿಸಿಕೊಳ್ಳಲು ಪರಿಶಿಷ್ಟರು ಅನುಭವಿಸುತ್ತಿರುವ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಮಟ್ಟದಲ್ಲಿ ಕಂದಾಯ ಅದಾಲತ್ ಮಾದರಿಯಲ್ಲಿ ‘ಖಾತಾ ಆಂದೋಲನ’ ಕಾರ್ಯಕ್ರಮವನ್ನು ಮಾಡಿ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾಧೀಕಾರಿ ಹೇಳಿದರು.
ಭೂಮಿಯು ತಮ್ಮ ಹೆಸರಿನಲ್ಲಿ ಇಲ್ಲದ ಕಾರಣಕ್ಕೆ ಹಲವರ ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂಬ ಮಾಹಿತಿಯು ಲಭ್ಯವಾಗಿದ್ದು, ಸಮೀಕ್ಷೆ ನಡೆಸಿ ಶೌಚಾಲಯ ನಿರ್ಮಾಣಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದರು.
ಭೂಮಿಗೆ ಹಕ್ಕುಪತ್ರ ನೀಡುವ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನೂ ಪರಿಗಣಿಸುವಂತೆ ಮುಖಂಡರು ವಿನಂತಿಸಿದರು.
ಈ ಸಂಧರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮುಂಖಡರು ತಮ್ಮ ಹಕ್ಕುಪತ್ರ ನೀಡಿಕೆ ವಿಳಂಬ, ಶೈಕ್ಷಣಿಕ ಸೌಲಭ್ಯ ಮಾಹಿತಿ ಕೊರತೆ, ರಸ್ತೆ ಸಂಪರ್ಕ ಹಾಗೂ ನೆರೆ ಮನೆಯವರು ನೀಡುತ್ತಿರುವ ಕಿರುಕುಳದಂತಹ ಸಮಸ್ಯೆಗಳನ್ನು ಹೇಳಿಕೊಂಡರು, ನಿಗದಿತ ಸಮಸ್ಯೆಗಳನ್ನು ಸ್ಥಳದಲ್ಲೇ ವಿಚಾರಿಸಿ ಅಂತವರ ವಿರುಧ್ದ ಪ್ರಕರಣ ದಾಖಲು ಮಾಡುವ ಬಗ್ಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ ಪಿ ವೇದಮೂರ್ತಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರಲ್ಲದೆ, ಕೆಲವು ನಿರ್ದಿಷ್ಟ ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುವುದಾಗಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪ್ರಸ್ತಾಪವಾದ ಕಿರುಕುಳ ಪ್ರಕರಣಗಳ ಮಾಹಿತಿ ಪಡೆದ ಡಿಸಿಪಿ ಹನುಮಂತರಾಯ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಕ್ತ ಕ್ರಮಕ್ಕೆ ಸೂಚಿಸಿದರು.
ವೆನ್‍ಲಾಕ್ ಆಸ್ಪತ್ರೆಯಲ್ಲಿ ಐಸಿಯು ಕೊರತೆಯನ್ನು ಸಭೆಯ ಮುಂದಿಟ್ಟವರಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 30 ಕೋಟಿ ರೂ.ಗಳನ್ನು ಬಳಸಿಕೊಂಡು 34 ಬೆಡ್‍ಗಳನ್ನು ಹೊಂದಿದ ಐಸಿಯು ಕೊಠಡಿ ನಿರ್ಮಿಸಲಾಗುವುದಲ್ಲದೆ, ಆಪರೇಷನ್ ಥಿಯೇಟರ್‍ನ್ನು ಹೊಸದಾಗಿ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದಲ್ಲದೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಸೇವೆಯನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾವಂತ ಯುವಕ ಯುವತಿಯರಿಗೆ ಐಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಿಎಸ್‍ಆರ್ ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಪ್ರತ್ಯೇಕ ಕೇಂದ್ರ ಪ್ರಾರಂಭಮಾಡುವ ಯೋಜನೆ ಹಾಕಲಾಗುವುದು ಜೊತೆಗೆ ವಿದ್ಯಾವಂತ ಯುವಕರಿಗೆ ಕೌಶಲ್ಯಾಭಿವೃದ್ಧಿ ಕಲಿಕೆಗೂ ಸೇರ್ಪಡೆಗೊಳಿಸಲು ಪ್ರೋತ್ಸಾಹ ನೀಡಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧೀಕಾರಿ ಬಿ ಎಂ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಹೇಶ್, ಸಮಾಜ ಕಲ್ಯಾಣಾಧಿಕಾರಿ ಯೋಗೇಶ್ ಸಭೆಯಲ್ಲಿದ್ದರು.