ಆನಗಳ್ಳಿ ದತ್ತಾಶ್ರಮಕ್ಕೆ ಅಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ಭೇಟಿ
ಕುಂದಾಪುರ : ಭಗವಂತ ವಿಶ್ವರೂಪಿ, ಭಕ್ತಿ ಹಾಗೂ ಪ್ರೀತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ತಾಯಿ ಕಾಳಿಯೊಡನೆ ಭಕ್ತಿಯ ಭಾವನಾತ್ಮಕ ಸಂಬಂಧಗಳನ್ನು ಹೊಂದುವ ಪ್ರತಿಯೊಬ್ಬ ಭಕ್ತರಿಗೂ ಆಕೆಯ ಮಾತೆಯ ವಾತ್ಸಲ್ಯ ದೊರೆತು ಅವರಿಗೆ ಪ್ರಸನ್ನತೆ ದೊರಕುತ್ತದೆ ಎಂದು ಪ್ರಸಿದ್ಧ ಅಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ಹೇಳಿದರು.
ಇಲ್ಲಿಗೆ ಸಮೀಪದ ಆನಗಳ್ಳಿಯ ದತ್ತಾಶ್ರಮಕ್ಕೆ ಮಂಗಳವಾರ ಸಂಜೆ ಆಗಮಿಸಿದ ಅವರು ಕ್ಷೇತ್ರದ ದಕ್ಷಿಣ ಭದ್ರಕಾಳಿ ಹಾಗೂ ಮೂಕಾಂಬಿಕೆ, ಆದಿಶಕ್ತಿ ಸನ್ನಿಧಿಗೆ ಭೇಟಿ ನೀಡಿ ಭಕ್ತಿ ಸುಧೆಯನ್ನು ಅರ್ಪಿಸಿ ಮಾತನಾಡಿದರು.
ಭಾರತದಲ್ಲಿನ ಜಾತಿ ವಾದಗಳೇ ಅಖಂಡ ಹಿಂದೂ ಸಮಾಜವನ್ನು ಒಡೆಯುತ್ತಿದೆ. ತಾಯಿ ಭಾರತೀಯ ಮಡಿಲಲ್ಲಿ ಇರುವ ಸಮಸ್ತ ಹಿಂದೂಗಳು ಜಾತಿ–ವಿಜಾತಿಯನ್ನು ಮರೆತು ಒಂದೇ ಧರ್ಮದ ನೆಲೆಯಲ್ಲಿ ಒಗ್ಗೂಡಿದಾಗ ಮಾತ್ರ ಭಾರತದ ಗತ ಸಾಮಾ್ರಜ್ಯ ಹಾಗೂ ಸುವರ್ಣ ದಿನಗಳ ಇತಿಹಾಸ ಮರುಕಳಿಸಲು ಸಾಧ್ಯ. ದೇವರು ಹಾಗೂ ಭಕ್ತರ ನಡುವೇ ಯಾವುದೆ ಅಡೆ–ತಡೆಗಳು ಇಲ್ಲ. ಕೇವಲ ಭಕ್ತಿಯ ಮಾರ್ಗ ಒಂದರಿಂದಲೆ ಇಬ್ಬರನ್ನು ಒಗ್ಗೂಡಿಸುತ್ತದೆ. ಭಕ್ತಿಯೇ ಧನ್ಯತೆ ಹಾಗೂ ಸಾಕ್ಷಾತ್ಕಾರದ ಮೂಲ. ಕಪಟತನವಿಲ್ಲದ ಮನಸ್ಸಿನ ಭಾವನೆಗಳು ಶೀಘ್ರವಾಗಿ ಮಾತೆ ಕಾಳಿಯನ್ನು ತಲುಪುತ್ತದೆ ಎಂದರು.
ಆದಿಶಕ್ತಿ, ದಕ್ಷಿಣ ಭದ್ರಕಾಳಿ ಹಾಗೂ ನರ್ಮದಾ ಲಿಂಗದ ಸನ್ನಿಧಿಯಲ್ಲಿ ಭಾವಪೂರ್ಣರಾಗಿ ಭಕ್ತಿಯ ಸುಧೆಯನ್ನು ಅರ್ಪಿಸಿದ ಅವರು, ಗಂಟೆಗಳ ಕಾಲ ಮಂತ್ರ ಘೋಷ ಹಾಗೂ ಸುಧೆಯನ್ನು ಅರ್ಪಿಸಿ ಬಾವುಕರಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ದೇಶದ ಹಲವು ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿದ್ದೇನೆ. ಇಲ್ಲಿ ಅದ್ಭುತವಾದ ದೈವಿ ಚೈತನ್ಯವಿದೆ. ಇದೊಂದು ಸಿದ್ಧಿ ಕ್ಷೇತ್ರ. ಸಾಧಕರು ಇಲ್ಲಿ ನೆಮ್ಮದಿಯನ್ನು ಕಾಣುತ್ತಾರೆ. ದೇವರ ಸಂಕಲ್ಪವಿಲ್ಲದೆ ಏನು ನಡೆಯಲು ಸಾಧ್ಯವಿಲ್ಲ, ಇಲ್ಲಿ ನಡೆಯುತ್ತಿರುವುದು ಶ್ರೀದೇವಿಯ ಸಂಕಲ್ಪವೇ ಎಂದು ನುಡಿದರು.
ಆನಗಳ್ಳಿ ಶ್ರೀ ದತ್ತಾಶ್ರಮದ ಪ್ರವರ್ತಕರಾದ ಸುಭಾಸ್ ಪೂಜಾರಿ ಸಂಗಮ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಆನಗಳ್ಳಿ, ಪ್ರತೀಕ್ ಶೆಟ್ಟಿ ಮುಲ್ಕಿ, ಶಕ್ತಿರಾಜ್ ವಿದರ್ಭ, ಹರೀಶ್ ತೋಳಾರ್ ಕೊಲ್ಲೂರು, ನಾಗೇಶ್ ಪುತ್ರನ್ ಸಂಗಮ್, ನಿತ್ಯಾನಂದ ನಾಯಕ್ ಸಂಗಮ್, ರಾಜೇಂದ್ರ ಕಾಂಚನ್ ಸಂಗಮ್,ಅಭಿಷೇಕ್ ಭಂಡಾರಿ ಎಕ್ಕಾರು ಹಾಗೂ ಶರತ್ ಹೆಗ್ಡೆ ಗುರ್ಮೆ ಇದ್ದರು.