ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಐಸ್‌ಕ್ರೀಂ ನಲ್ಲಿ ಮಾನವ ಬೆರಳಿನ ತುಂಡು!
ಮುಂಬೈ: ಆನ್‌ಲೈನ್ ಮೂಲಕ ಕೋನ್ ಐಸ್‌ಕ್ರೀಂ ಆರ್ಡರ್ ಮಾಡಿದ್ದ ಮುಂಬೈನ ವೈದ್ಯೆಯೊಬ್ಬರು ತಮಗೆ ಐಸ್‌ಕ್ರೀಂನಲ್ಲಿ ಮಾನವ ಬೆರಳಿನ ಒಂದು ತುಂಡು ಸಿಕ್ಕಿದೆ ಎಂದು ಹೇಳಿ ಕಂಪನಿಯ ವಿರುದ್ಧ ದೂರು ನೀಡಿದ್ದಾರೆ.
ಇಪ್ಪತ್ತಾರು ವರ್ಷದ ವೈದ್ಯೆ ಮಲಾಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಲಾಡ್ ವೆಸ್ಟ್ ನಿವಾಸಿಯಾಗಿರುವ ವೈದ್ಯೆ ಯಮ್ಮೋ ಕಂಪನಿಯ ಬಟರ್‌ಸ್ಕಾಚ್ ಐಸ್‌ಕ್ರೀಂ ಆರ್ಡರ್ ಮಾಡಿದ್ದರು.
ಬುಧವಾರ ಮಧ್ಯಾಹ್ನ ಊಟದ ನಂತರ ಐಸ್‌ಕ್ರೀಂ ಸವಿಯುತ್ತಿದ್ದ ಆಕೆಗೆ ಅದರಲ್ಲಿ ಅರ್ಧ ಇಂಚು ಉದ್ದದ ಚರ್ಮ ಮತ್ತು ಉಗುರು ಪತ್ತೆಯಾಗಿ ಹೌಹಾರಿದ್ದರು.
ಸ್ನಾತ್ತಕೋತ್ತರ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಈ ಎಂಬಿಬಿಎಸ್ ವೈದ್ಯೆ ತಕ್ಷಣ ಕಂಪನಿಯ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡರೂ ಪ್ರತಿಕ್ರಿಯೆ ದೊರೆಯದೇ ಇದ್ದಾಗ ಪೊಲೀಸ್ ದೂರು ನೀಡಿದ್ದಾರೆ.
ಐಸ್‌ಕ್ರೀಂನಲ್ಲಿ ಪತ್ತೆಯಾದ ಬೆರಳಿನ ತುಂಡನ್ನು ಫೊರೆನ್ಸಿಕ್ ಪರಿಶೀಲನೆಗಾಗಿ ಕಳುಹಿಸಲಾಗಿದೆ.