ಆನ್ ಲೈನ್ ಗೇಮಿಂಗ್ ಚಟಕ್ಕೆ ಮತ್ತೊಂದು ಬಲಿ! ಬೆಳಗಿನ ಜಾವ 3 ಗಂಟೆವರೆಗೆ ಪಬ್ಜಿ ಆಡಿ ನೇಣಿಗೆ ಶರಣಾದ ಬಾಲಕ
ಕೋಟಾ(ರಾಜಸ್ಥಾನ): ಇಡೀ ರಾತ್ರಿ ಮೊಬೈಲ್ ನಲ್ಲಿ ಪಬ್ಜಿ ಆಟವಾಡಿದ್ದ 14 ವರ್ಷದ ಬಾಲಕನೊಬ್ಬ ಬೆಳಗಿನ ಜಾವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನ ಕೋಟಾದಲ್ಲಿ ನಡೆದಿದೆ.
ಕೋಟಾದ ರೈಲ್ವೆ ಕಾಲೋನಿ ಪೊಲೀಸ್ ಠಾಣೆ ಉಸ್ತುವಾರಿ ಹನ್ಸರಾಜ್ ಮೀನಾ ಮಾತನಾಡಿ ಯೋಧನ ಪುತ್ರ, ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ಶನಿವಾರ ಮುಂಜಾನೆ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದಿದ್ದಾರೆ.
ಬಾಲಕನ ಕುಟುಂಬ ಹೇಳಿದಂತೆ ಬಾಲಕ ಮೂರು ದಿನಗಳ ಹಿಂದೆ ತನ್ನ ತಾಯಿಯ ಮೊಬೈಲ್ ಫೋನ್ನಲ್ಲಿ ಗೇಮಿಂಗ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡಿದ್ದಾನೆ ಮತ್ತು ಅಂದಿನಿಂದಲೂ ನಿರಂತರವಾಗಿ ಪಬ್ಜಿ ಆಟವಾಡುತ್ತಿದ್ದ.
ಆತ್ಮಹತ್ಯೆ ಮಾಡಿಕೊಳ್ಲುವ ಮುನ್ನಾ ದಿನ ಸಹ ಅವನು ತನ್ನ ಸಹೋದರ ಕಲಿಯುತ್ತಿದ್ದ ಕೋಣೆಯಲ್ಲಿ ಮುಂಜಾನೆ 3 ಗಂಟೆಯವರೆಗೆ ಆಟವನ್ನು ಆಡುತ್ತಿದ್ದನು ಆದರೆ ಬೆಳಿಗ್ಗೆ ನೋಡಲಾಗಿ ಕಿಟಕಿಯ ಗ್ರಿಲ್ನಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ ಎಂದು ಹನ್ಸರಾಜ್ ಮೀನಾ ಮಾಹಿತಿ ನೀಡಿದರು.
ಘಟನಾ ಸ್ಥಳದಲ್ಲಿ ಯಾವ ಡೆತ್ ನೋಟ್ ಪತ್ತೆಯಾಗಿಲ್ಲ. ಬಾಲಕ ತನ್ನ ತಾಯಿ ಮತ್ತು ಸಹೋದರನೊಂದಿಗೆ ಕೋಟಾದ ಗಾಂಧಿ ಕಾಲೋನಿಯಲ್ಲಿ ವಾಸಿಸುತ್ತಿದ್ದರೆ, ಅವನ ತಂದೆ ಪ್ರಸ್ತುತ ಅರುಣಾಚಲ ಪ್ರದೇಶದಲ್ಲಿ ಸೇನಾಪಡೆಯ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಬಾಲಕನ ಶವವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಯ ಮೋರ್ಗ್ನಲ್ಲಿ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.