ಆಪ್ತನ ಜಾಗ ವಿಲೇವಾರಿಗೆ ಒಪ್ಪದೇ ಇದ್ದುದಕ್ಕೆ ದಕ್ಷ ಅಧಿಕಾರಿಯ ವರ್ಗ: ಜಿಲ್ಲೆಯಾದ್ಯಂತ ಸಾರ್ವಜನಿಕರ ಆಕ್ರೋಶ
ಉಡುಪಿ: ಜಿಲ್ಲೆಯ ಮಾಜಿ ಶಾಸಕರೊಬ್ಬರ ಒತ್ತಡದಿಂದ ದಕ್ಷ ಅಧಿಕಾರಿಯಾದ ಕುಂದಾಪುರ ಉಪವಿಭಾಗದ ಎಸಿ ರಶ್ಮಿ ಎಸ್.ಆರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಒಂದು ವರ್ಷದ ಹಿಂದೆಯಷ್ಟೇ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದಿದ್ದ ರಶ್ಮಿ ಅವರನ್ನು ಈಗ ಮತ್ತೆ ಬೇರೆ ಸ್ಥಳಕ್ಕೆ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ತಮ್ಮ ಉತ್ತಮ ಸೇವೆ ಮೂಲಕ ಎಸಿ ರಶ್ಮಿ ಅವರು ಜಿಲ್ಲೆಯಲ್ಲಿ ಹೆಸರು ಮಾಡಿದ್ದು ಸದ್ಯ ರಶ್ಮಿಯವರ ದಿಢೀರ್ ವರ್ಗಾವಣೆ ಕುರಿತು ಉಡುಪಿ ಜಿಲ್ಲೆಯ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕರೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಗರಂ ಆಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಬೈಂದೂರು ಮಾಜಿ ಶಾಸಕರೊಬ್ಬರು ಒತ್ತಡ ಹಾಕಿ ರಶ್ಮಿಯವರನ್ನು ವರ್ಗಾವಣೆ ಮಾಡಿಸಲಾಗಿರುವ ಆರೋಪಿಸಲಾಗಿದೆ. ಈ ಮಾಜಿ ಶಾಸಕರ ಆಪ್ತನ ಜಾಗದ ವಿಷಯದ ತಕರಾರಿಗೆ ದಕ್ಷ ಅಧಿಕಾರಿ ಸಹಕಾರ ನೀಡಿರಲಿಲ್ಲ. ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಜಾಗಕ್ಕಾಗಿ ಕಾನೂನು ಮೀರಿ ತಕರಾರು ವಿಲೇವಾರಿಗೆ ಅಧಿಕಾರಿ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡುವುದಾಗಿ ರಶ್ಮಿ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಲಾಗಿದೆ. ರಶ್ಮಿ ಅವರ ದಿಢೀರ್ ವರ್ಗಾವಣೆಯಿಂದ ಕುಂದಾಪುರದ ಜನ ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಎಂಎಲ್ಎ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.