ಆಯುಧಗಳಿಗಿಂತ ಮನುಷ್ಯನ ಹಿಂಸಾತ್ಮಕ ಮನಸ್ಸು ಅಪಾಯಕಾರಿ: ಡಾ. ಕುರಿಯನ್
ಮೂಡುಬಿದಿರೆ: ನಮ್ಮಲ್ಲಿರುವ ಬಾಂಬ್, ಗನ್, ಚಾಕು ಚೂರಿಗಳು ಅಪಾಯಕಾರಿಗಳಲ್ಲ. ಆದರೆ ನಮ್ಮ ಮನಸ್ಸಿನಲ್ಲಿರುವ ಹಿಂಸಾ ಮನೋಭಾವ ಬಹಳಷ್ಟು ಅಪಾಯಕಾರಿ. ಮನುಷ್ಯ ಮನುಷ್ಯನ್ನು ಕೊಲ್ಲಬೇಕು ಎನ್ನುವ ಆಲೋಚನೆಗಳನ್ನು ತರುವ ಸಿದ್ಧಾಂತ ಹಾಗೂ ವ್ಯವಸ್ಥೆಯನ್ನು ನಮ್ಮ ಮನಸ್ಸಿನಿಂದ ತೆಗೆದುಹಾಗಬೇಕಾದ ಅಗತ್ಯವಿದೆ. ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.
ಪುಲ್ವಾಮಾದಲ್ಲಿ ನಡೆದ ಉಗ್ರನ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥ ಆಳ್ವಾಸ್ ಕಾಲೇಜಿನಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಮನುಷ್ಯನ ಮನಸ್ಸು ಹಿಂಸಾತ್ಮಕ ರೂಪತಾಳಿದಾಗ ಅದು ಸಮಾಜದ ಶಾಂತಿಯನ್ನು ಕೆಡಿಸುತ್ತದೆ. ದೇಶಕ್ಕಾಗಿ ಮಡಿದ ಯೋಧರನ್ನು ಇಂದು ಇಡೀ ರಾಷ್ಟ್ರವೇ ಸ್ಮರಿಸುತ್ತಿದೆ. ಎಲ್ಲಾ ಸಂದರ್ಭದಲ್ಲೂ ನಮ್ಮ ದೇಶದ ರಕ್ಷಣಾ ಪಡೆಯೊಂದಿಗೆ ನಾವು ಒಗ್ಗಟ್ಟಿನ್ನು ಪ್ರದರ್ಶಿಸಿ, ವಿಧ್ವಂಸಕ ಶಕ್ತಿಗಳಿಂದ ದೇಶವನ್ನು ಪಾರು ಮಾಡುವ ಕೆಲಸದಲ್ಲಿ ಕೈಜೋಡಿಸಬೇಕಿದೆ ಎಂದರು.
ಐಕ್ಯತಾ ಮಂತ್ರ ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ ಚಂದ್ರಶೇಖರ ಗೌಡ ಹಾಗೂ ವಿದ್ಯಾರ್ಥಿಗಳ ತಂಡ ‘’ಎದ್ದು ನಿಲ್ಲು ವೀರ ದೇಶ ಕರೆದಿದೆ’’ ಎಂಬ ಪ್ರೇರಣಾ ಗೀತೆಯನ್ನು ಹಾಡಿದರು. ಅಖಂಡ ಭಾರತವನ್ನು ಪ್ರತಿಬಿಂಬಿಸುವ ದೇಶದ ಭೂಪಟ, ಸೈನಿಕರ ಶಿರಸ್ತ್ರಾಣ, ಬಂದೂಕುಗಳನ್ನು ಪ್ರದರ್ಶಿಲಾಯಿತು. ಭಾರತೀಯ ಯೋಧರ ಬದುಕು ಬವಣೆಗಳನ್ನು ಪ್ರಸ್ತುತಪಡಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ವೀರ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಸುಮಾರು 1800 ವಿದ್ಯಾರ್ಥಿಗಳು ಹಾಗೂ 150 ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ ಚಂದ್ರಶೇಖರ ಗೌಡ ನಿರೂಪಿಸಿದರು.