ಆರಿದ್ರಾ ಮಳೆ ಅಬ್ಬರಕ್ಕೆ ನಲುಗಿದ ನದಿತೀರದ ಜನತೆ!

Spread the love

ಆರಿದ್ರಾ ಮಳೆ ಅಬ್ಬರಕ್ಕೆ ನಲುಗಿದ ನದಿತೀರದ ಜನತೆ!

  • ಎಡೆಬಿಡದೆ ಸುರಿದ ಮಳೆಗೆ ತುಂಬಿ ಹರಿದ ನದಿಗಳು.
  • ತಗ್ಗುಪ್ರದೇಶದಲ್ಲಿನ ಮನೆ, ಕೃಷಿಗದ್ದೆ, ತೋಟಗಳು ಜಲಾವೃತ.

 ಕುಂದಾಪುರ: ಬುಧವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ನದಿತೀರದ ಪ್ರದೇಶಗಳು ಗುರುವಾರ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಧಾರಕಾರ ಮಳೆಗೆ ಸೌಪರ್ಣಿಕಾ ನದಿ ತುಂಬಿ ಹರಿದ ಕಾರಣ ಸಾಲ್ಬುಡ, ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ ಮೊದಲಾದೆಡೆ ವ್ಯಾಪಕ ನೆರೆಯಾಗಿದ್ದು, ಸುಮಾರು 80 ಕ್ಕೂ ಅಧಿಕ ಮನೆಗಳಿಗೆ ಸೌಪರ್ಣಿಕಾ ನದಿ ನೀರು ನುಗ್ಗಿದೆ. ಅಗ್ನಿಶಾಮಕದಳ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ನೆರೆ ಪ್ರಮಾಣ ಹೆಚ್ಚಾದರೆ ಜನರನ್ನು ಸ್ಥಳಾಂತರಿಸಲು ಸನ್ನದ್ಧರಾಗಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ಭಾರೀ ನೆರೆಯ ವಾತಾವರಣ ನಿರ್ಮಾಣವಾಗಿದೆ. ಮನೆಗಳಲ್ಲಿರುವ ಜನರಿಗೆ, ಜಾನುವಾರುಗಳಿಗೆ ಜಲದಿಗ್ಬಂಧನವಾಗಿದೆ. ಜಾನುವಾರುಗಳನ್ನು ಬಿಟ್ಟು ಮನೆಯಿಂದ ಹೊರಬರಲು ಗ್ರಾಮಸ್ಥರ ನಿರಾಕರಿಸಿದ್ದು, ದೋಣಿಯ ಮೂಲಕ ಜನರು ಓಡಾಟ ನಡೆಸುತ್ತಿದ್ದಾರೆ. ಸಂಜೆ ವೇಳೆ ನೆರೆ ಸ್ವಲ್ಪ ಪ್ರಮಾಣದಲ್ಲಿ ಇಳಿದಿದೆ.

ಅಧಿಕಾರಿಗಳ ವಿರುದ್ದ ಆಕ್ರೋಶ:
ನಾವುಂದ-ಸಾಲ್ಬುಡ ನೆರೆಪೀಡಿತ ಪ್ರದೇಶಗಳಿಗೆ ತಹಸೀಲ್ದಾರ್ ಪ್ರದೀಪ್, ತಾ.ಪಂ ಇಒ ಭಾರತಿ, ತಾ.ಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಕ್ರೋಶಗೊಂಡ ನಿವಾಸಿಗಳು ಅಧಿಕಾರಿಗಳ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ನೆರೆ ಹಾವಳಿ ತಡೆಯಲು ಶಾಶ್ವತ ಯೋಜನೆಗ ಮುಂದಾಗದೆ ಪ್ರತೀ ಬಾರಿಯೂ ನೆರೆ ಬಂದಾಗ ಮುಖ ತೋರಿಸಿ ಹೋಗುವ ನಾಟಕ ಯಾಕೆ ಮಾಡುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಸೌಕೂರು ಜಲಾವೃತ:

ವಾರಾಹಿ ನದಿಯೂ ತುಂಬಿ ಹರಿದ ಪರಿಣಾಮ ಕುಂದಾಪುರ ತಾಲೂಕಿನ‌ ಗುಲ್ವಾಡಿ ಗ್ರಾ.ಪಂ ವ್ಯಾಪ್ತಿಯ ಸೌಕೂರಿನ‌ ಕುದ್ರು, ಕುಚ್ಚಟ್ಟು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 15 ಕ್ಕೂ ಅಧಿಕ‌ ಮನೆಗಳು ಜಲಾವೃತಗೊಂಡಿದ್ದು, ಜನಜೀವನ‌ ಅಸ್ತವ್ಯಸ್ಥಗೊಂಡಿದೆ. ಸೌಕೂರು ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುನರ್ವಸತಿ‌ ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆಯ ವೇಳೆ ನೆರೆ ಇಳಿಮುಖಗೊಂಡಿದೆ. ಅನೇಕ ಮನೆಗಳು, ಕೃಷಿಗದ್ದೆ, ತೋಟಗಳು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ನೆರೆ ಪೀಡಿತ ಸೌಕೂರು ಪ್ರದೇಶಕ್ಕೆ ಎಸಿ ರಶ್ಮಿ ಎಸ್.ಆರ್, ತಹಸೀಲ್ದಾರ್ ಎಚ್.ಎಸ್ ಶೋಭಾಲಕ್ಷ್ಮೀ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಕರಣಿಕ ಪ್ರಕಾಶ್ ನಾಯ್ಕ್, ಪಂಚಾಯತ್ ಪಿಡಿಓ ವನಿತಾ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಸುದೀಶ್ ಶೆಟ್ಟಿ, ಸುರೇಂದ್ರ, ಹಂಝ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲೆಗಳಿಗೆ ರಜೆ ಗೊಂದಲ: ಪೋಷಕರು ಬೇಸರ:
ವ್ಯಾಪಕ ಮಳೆಯ ಹಿನ್ನೆಲೆ ಗುರುವಾರ ಬೈಂದೂರು ವಲಯ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಣೆ ಮಾಡಿದ್ದರು. ರಜೆ ಘೋಷಣೆ ವಿಳಂಬವಾದ ಹಿನ್ನೆಲೆ ಕೆಲ ವಿದ್ಯಾರ್ಥಿಗಳು ಶಾಲೆಗೆ ತೆರಳಿ ಪುನಃ ಮನೆಗೆ ಬಂದ ಪ್ರಸಂಗವೂ ನಡೆಯಿತು. ರಜೆ ನೀಡುವಲ್ಲಿ ಜಿಲ್ಲಾಡಳಿತ ವಿಳಂಬ ನೀತಿ ವಿರೋಧಿಸಿ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಳೆ ವಾತಾವರಣ ಇದ್ದಾಗ ಮೊದಲೇ ರಜೆ ಘೋಷಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ.


Spread the love
Subscribe
Notify of

0 Comments
Inline Feedbacks
View all comments