ಆರೆಸ್ಸೆಸ್ ಶೀಘ್ರದಲ್ಲೇ ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇದೆ : ರಾಹುಲ್ ಗಾಂಧಿ
ಹೊಸ ದಿಲ್ಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಬೆನ್ನಲ್ಲೇ ಆರೆಸ್ಸೆಸ್ ಶೀಘ್ರದಲ್ಲೇ ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ “ಭಾರತದಲ್ಲಿ ಯಾರು ಹೆಚ್ಚು ಭೂಮಿ ಹೊಂದಿದ್ದಾರೆ? ಕ್ಯಾಥೊಲಿಕ್ ಚರ್ಚ್ Vs ವಕ್ಫ್ ಮಂಡಳಿ ಚರ್ಚೆ” ಲೇಖನದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ವಕ್ಫ್ ಮಸೂದೆ ಈಗ ಮುಸ್ಲಿಂ ಸಮುದಾಯದ ಮೇಲೆ ದಾಳಿ ನಡೆಸಿದರೂ, ಭವಿಷ್ಯದಲ್ಲಿ ಇನ್ನಿತರ ಸಮುದಾಯಗಳನ್ನು ಗುರಿಯಾಗಿಸಿಕೊಳ್ಳಲು ಪೂರ್ವ ನಿದರ್ಶನವಾಗಲಿದೆ ಎಂದು ನಾನು ಈ ಹಿಂದೆ ಹೇಳಿದ್ದೆ. ಈಗ ಆರೆಸ್ಸೆಸ್ ತನ್ನ ಗಮನವನ್ನು ಕ್ರಿಶ್ಚಿಯನ್ನರತ್ತ ತಿರುಗಿಸಲು ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಸಂವಿಧಾನ ಮಾತ್ರ ಜನರನ್ನು ಇಂತಹ ದಾಳಿಗಳಿಂದ ರಕ್ಷಿಸುವ ಗುರಾಣಿಯಾಗಿದ್ದು, ಅದನ್ನು ರಕ್ಷಿಸುವುದು ನಮ್ಮ ಸಾಮೂಹಿಕ ಕರ್ತವ್ಯವಾಗಿದೆ ಎಂದು ಹೇಳಿದರು.
ಸದ್ಯ ‘ಆರ್ಗನೈಸರ್’ ಪೋರ್ಟಲ್ ನ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲದ ಈ ಲೇಖನದಲ್ಲಿ, ದೇಶದಲ್ಲಿ ಅತ್ಯಧಿಕ ಪ್ರಮಾಣದ ಭೂ ಮಾಲಕತ್ವ ಹೊಂದಿರುವ ಸರಕಾರೇತರ ಭೂ ಮಾಲಕರ ಪೈಕಿ ಕ್ಯಾಥೊಲಿಕ್ ಚರ್ಚ್‌ಗಳು ಅಂದಾಜು 7 ಕೋಟಿ ಹೆಕ್ಟೇರ್ ಭೂಮಿಯ ಒಡೆತನ ಹೊಂದಿವೆ ಎಂದು ಪ್ರತಿಪಾದಿಸಲಾಗಿದೆ. ಭಾರತೀಯ ಚರ್ಚ್ ಕಾಯ್ದೆ- 1927ರ ಅಡಿ ದೊಡ್ಡ ಪ್ರಮಾಣದ ಭೂ ಮಂಜೂರಾತಿ ಮಾಡಲು ಒದಗಿಸಿದ ಅವಕಾಶದಿಂದ, ಬ್ರಿಟಿಷರ ಕಾಲದಲ್ಲಿ ಚರ್ಚ್‌ಗಳಿಗೆ ಬಹುತೇಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು ಎಂದು ಆರ್ಗನೈಸರ್ ಪತ್ರಿಕೆಯ ಲೇಖನದಲ್ಲಿ ಆರೋಪಿಸಲಾಗಿತ್ತು. 1965ರ ಭಾರತ ಸರಕಾರದ ಸುತ್ತೋಲೆಯ ಪ್ರಕಾರ, ಬ್ರಿಟಿಷರು ಭೋಗ್ಯಕ್ಕೆ ಕೊಟ್ಟಿದ್ದ ಭೂಮಿಯನ್ನು ಇನ್ನು ಮುಂದೆ ಚರ್ಚ್ ಆಸ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಆದರೆ, ಈ ಮಾರ್ಗಸೂಚಿ ದುರ್ಬಲವಾಗಿ ಅನುಷ್ಠಾನಗೊಂಡಿದೆ ಎಂಬುದರತ್ತಲೂ ಆ ಲೇಖನದಲ್ಲಿ ಬೊಟ್ಟು ಮಾಡಲಾಗಿದೆ.