ಆರೋಗ್ಯಕರ ಸಮಾಜಕ್ಕೆ ಸ್ವಚ್ಛತೆಯೇ ಸೋಪಾನ
ಮಂಗಳೂರು: ಮಾನವ ಸಂಪನ್ಮೂಲದ ಸದ್ಭಳಕೆ ಸೂಕ್ತ ರೀತಿಯಲ್ಲಿ ಮಾಡಿದಾಗ ವಿಶ್ವಕ್ಕೆ ಅದರಿಂದ ಪ್ರಯೋಜನವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮಹಮ್ಮದ್ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ, ಸಾರ್ವಜನರಿಕ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ ಇದರ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುರಿಬೈಲು ಪ್ರೌಢ ಶಾಲೆಯಲ್ಲಿ ಶ್ರುಕ್ರವಾರ ಆಯೋಜಿಸಿದ `ಜಿಲ್ಲಾ ಮಟ್ಟದ ವಿಶ್ವ ಕೈತೊಳೆಯುವ ದಿನಾಚರಣೆ’ಯಲ್ಲಿ ಈ ವಿಷಯವನ್ನು ತಿಳಿಸಿದರು. ಪೋಷಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಪರಿಸರ ಕಾಳಜಿ ಇದ್ದಲ್ಲಿ ಮಕ್ಕಳು ಅವರನ್ನೇ ಅನುಕರಿಸುತ್ತಾರೆ ಎಂದು ಅವರು ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಸ್ವಚ್ಛತೆ, ಆರೋಗ್ಯ, ಶಿಕ್ಷಣ ಇವುಗಳು ಒಂದಕ್ಕೊಂದು ಯಾವರೀತಿ ಪೂರಕವಾಗಿದ ಮತ್ತು ಇವುಗಳ ಪ್ರಾಮುಖ್ಯತೆಯ ಏನು ಎಂಬುವುದರ ಕುರಿತು ತಿಳಿಸಿದರು. ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ, `ನಮ್ಮ ಸುತ್ತ-ಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ಎಲ್ಲವು ಸ್ವಚ್ಛವಾಗಿರುತ್ತದೆ. ಈ ಮೂಲಕ ಆರೋಗ್ಯಕರ ಸಮುದಾಯವನ್ನು ರೂಪಿಸಲು ಸಾಧ್ಯ, ಈ ದಿಸೆಯಲ್ಲಿ ಎಲ್ಲರೂ ಪ್ರಯತ್ನವನ್ನು ಮುಂದುವರಿಸಬೇಕು ಅಂತ ಕಿವಿಮಾತು ಹೇಳಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮಾತನ್ನು ಉಲ್ಲೇಖಿಸುತ್ತಾ, `ಗ್ರಾಮವೊಂದು ಅಭಿವೃದ್ಧಿ ಹೊಂದಿದಲ್ಲಿ ತಾಲೂಕು ಮತ್ತು ಜಿಲ್ಲೆಗಳು ಸಹಜವಾಗಿಯೇ ಅಭಿವೃದ್ಧಿಯನ್ನು ಹೊಂದುತ್ತದೆ’ ಎಂದು ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್ ಅವರು ಹೇಳಿದರು. ಇದೇ ರೀತಿ ಕೈ ತೊಳೆಯುವುದರಿಂದ ಆಗುವ ಪ್ರಯೋಜನ ಹಾಗೂ ನೀರಿನ ಮಿತಬಳಕೆಯ ಮಹತ್ವದ ಬಗ್ಗೆ ಅವರು ತಿಳಿಹೇಳಿದರು. ಮುಂದುವರಿದು, `ಆರೋಗ್ಯ, ಆದಾಯ, ಶಿಕ್ಷಣ’ ಇವು ಮೂರು ವಿಷಯಗಳು ದೇಶವೊಂದರ ಅಭಿವೃದ್ಧಿಯನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಪೋಷಕರಿಗೆ `ಕೈ ತೊಳೆಯುವ ಸರಿಯಾದ ವಿಧಾನವನ್ನು ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ತಾಲೂಕು ಪಂಚಾಯತ್‍ನ ಮಾಜಿ ಸದಸ್ಯೆ ದೇವಿಕಾ ಆರ್ ರೈ, ಸುರಿಬೈಲು ಶಾಲೆಯ ಗೌರವಾಧ್ಯಕ್ಷ ಅಬೂಬಕ್ಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ ಚಂದ್ರ ಶೆಟ್ಟಿ, ಸ್ವಚ್ಛ ಭಾರತ ಮಿಷನ್‍ನ ಜಿಲ್ಲಾ ನೆರವು ಘಟಕದ ಸಮನ್ವಯಾಧಿಕಾರಿ ಮಂಜುಳಾ, ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಜಿಲ್ಲಾ ಸಮುದಾಯ ಅಭಿವೃದ್ಧಿ ಸಮಾಲೋಚಕ ಸತೀಶ್ ಎನ್ ಭಟ್, ಮಾಹಿತಿ, ಶಿಕ್ಷಣ ಮತ್ತು ಸಂವಹ ಜಿಲ್ಲಾ ಸಮಾಲೋಚಕ ಸಂಶೀರ್ ಮತ್ತಿತರರು ಉಪಸ್ಥಿತರಿದ್ದರು.