ಆರೋಗ್ಯಪೂರ್ಣ ಭಾರತಕ್ಕಾಗಿ ಜಾಗೃತಿವಹಿಸೋಣ-ಡಾ. ಪದ್ಮನಾಭ ಕಾಮತ್ 

Spread the love

ಆರೋಗ್ಯಪೂರ್ಣ ಭಾರತಕ್ಕಾಗಿ ಜಾಗೃತಿವಹಿಸೋಣ-ಡಾ. ಪದ್ಮನಾಭ ಕಾಮತ್ 

ಮಂಗಳೂರು : ವಿಶ್ವವನ್ನೇ ವ್ಯಾಪಿಸಿರುವ ಕೊವಿಡ್-19 ಸೋಂಕು ಇನ್ನೂ ಕೆಲವು ವರ್ಷಗಳ ಕಾಲ ನಮ್ಮೊಂದಿಗೆ ಇರಲಿದೆ. ಹೀಗಾಗಿ ಸಾಮಾಜಿಕ ಅಂತರ ಸೇರಿದಂತೆ ಇತರ ಎಚ್ಚರಿಕೆ ಕ್ರಮಗಳನ್ನು ತಪ್ಪದೆ ಕೈಗೊಳ್ಳಬೇಕಿದೆ ಎಂದು ಕೆ.ಎಂ.ಸಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜರುಗಿದ 74 ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮುಖ್ಯವಾಗಿ ಇಳಿವಯಸ್ಸಿನವರು, ಮಕ್ಕಳು, ಇತರ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿದರೆ ಅದೇ ಆರೋಗ್ಯಪೂರ್ಣ ಭಾರತಕ್ಕೊಂದು ಕೊಡುಗೆ, ಎಂದರು. ಕೊರೋನಾ ಸೇನಾನಿಗಳನ್ನು ಪ್ರಶಂಸಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ ಎ, ಪ್ರತಿಯೊಬ್ಬರಿಗೂ ಸಮಾಜದ ಬಗ್ಗೆ ಕಳಕಳಿ, ಜವಾಬ್ದಾರಿಯಿರಬೇಕು ಎಂದರು.

ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎಂ ರಾಮಕೃಷ್ಣ ಎನ್‍ಎಸ್‍ಎಸ್ ಯೋಜನಾಧಿಕಾರಿಗಳಾದ ಡಾ. ಸುರೇಶ್ ಮತ್ತು ಡಾ. ಗಾಯತ್ರಿ ಎನ್, ಎನ್ಸಿಸಿ ಅಧಿಕಾರಿಗಳಾದ ಡಾ.ಯತೀಶ್ ಕುಮಾರ್ ಮತ್ತು ಡಾ. ಎನ್ ಜಯರಾಜ್ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಜ್ಞಾನ ವಿಭಾಗದ ಡಾ. ಭಾರತಿ ಪಿಲಾರ್ ಸ್ವಾಗತ ಕೋರಿದರು. ಇತಿಹಾಸ ವಿಭಾಗದ ಡಾ. ಮೀನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರೆ ಡಾ. ಕುಮಾರಸ್ವಾಮಿ ಧನ್ಯವಾದ ಸಮರ್ಪಿಸಿದರು.

ಬಹುವಿಧ ಆಚರಣೆ: ರೆಡ್‍ಕ್ರಾಸ್ ಮತ್ತು ಎನ್‍ಎಸ್‍ಎಸ್ ವತಿಯಿಂದ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮದ ಅತಿಥಿಗಳು ಗಿಡನೆಡುವ ಮೂಲಕ ಸ್ವಾತಂತ್ರೋತ್ಸವಕ್ಕೆ ಮೆರುಗು ತಂದರು. ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ. ಕೆ ಎ ನಾಗರತ್ನ, ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಉಪಸ್ಥಿತರಿದ್ದರು. ಎನ್ ಎಸ್ ಎಸ್ ಸ್ವಯಂ ಸೇವಕರು ತಮ್ಮ ಮನೆಯಲ್ಲೇ ಗಿಡನೆಟ್ಟು ಆಚರಣೆಯಲ್ಲಿ ಭಾಗಿಗಳಾದರು. ಇದೇ ವೇಳೆ ಎನ್ ಸಿ ಸಿ ಕೆಡೆಟ್‍ಗಳು ಡಾ. ಯತೀಶ್ ಕುಮಾರ್ ಅವರ ನೇತೃತ್ವದಲ್ಲಿ ವರ್ಚುವಲ್ ಸ್ವಾತಂತ್ರ್ಯೋತ್ಸವ ಆಚರಿಸಿ ಗಮನಸೆಳೆದರು.


Spread the love