ಆರೋಗ್ಯ, ಕೃಷಿಗೆ ಒತ್ತು ಕೊಟ್ಟ ಜನಸಾಮಾನ್ಯರ ಬಜೆಟ್- ಡಿ ವೇದವ್ಯಾಸ ಕಾಮತ್
ಮಂಗಳೂರು: ಗಂಭೀರ ಅನಾರೋಗ್ಯದಿಂದ ಬಳಲುವವರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ, ಪ್ರತಿ ಕುಟುಂಬಕ್ಕೆ ಐದು ಲಕ್ಷ ಆರೋಗ್ಯ ವಿಮೆಯಂತೆ ರಾಷ್ಟ್ರದ ಐವತ್ತು ಕೋಟಿ ಜನರಿಗೆ ಅನುಕೂಲವಾಗುವಂತೆ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಯ ಮಹಾಪರ್ವ, ಕೃಷಿ ಬೆಂಬಲ ಬೆಲೆ ಶೇಕಡಾ 150 ಹೆಚ್ಚಿಸಿ ನೇರ ರೈತರಿಗೆ ಸಿಗುವಂತೆ ಕ್ರಮ, ಆಪರೇಶನ್ ಗ್ರೀನ್ ಯೋಜನೆಗೆ 500 ಕೋಟಿ, ಕೃಷಿ ಉತ್ಪನ್ನ ಕೈಗಾರಿಕೆಗಳಿಗೆ ತೆರಿಗೆ ಇಲ್ಲದಂತಹ ರೈತಪರ, ಆರೋಗ್ಯ ಕ್ಷೇತ್ರದಲ್ಲಿ ಒತ್ತು ನೀಡಿದ ಕೇಂದ್ರ ಸರಕಾರದ ಬಜೆಟ್ ಜನಮೆಚ್ಚುಗೆಯ ಬಜೆಟ್ ಆಗಿ ಮೂಡಿಬಂದಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ರಾಷ್ಟ್ರದಲ್ಲಿ ಎರಡು ಕೋಟಿ ಹೊಸ ಶೌಚಾಲಯ, ಪಶುಸಂಗೋಪನೆ, ಮೀನುಗಾರರಿಗೆ ಕೃಷಿ ಕಾರ್ಡ್, ಪೆಟ್ರೋಲಿಯಂ ಬೆಲೆ ಇಳಿಕೆಗೆ ಕ್ರಮ, 42 ಮೆಗಾಫುಡ್ ಪಾರ್ಕ್ ಘೋಷಣೆ, ಕೃಷಿ, ಶಿಕ್ಷಣ, ಆರೋಗ್ಯಕ್ಕೆ ಒಂದು ಲಕ್ಷ 38 ಸಾವಿರ ಕೋಟಿ ನೆರವು, ಎಂಟು ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್, ಮಹಿಳಾ ಸ್ವಸಹಾಯ ಸಂಘಗಳಿಗೆ 72 ಸಾವಿರ ಕೋಟಿ ಸಾಲ ಸೌಲಭ್ಯ ಸಹಿತ ಅನೇಕ ಲಾಭಗಳು ಜನಸಾಮಾನ್ಯರಿಗೆ ಸಿಗಲಿವೆ. ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಸರಕಾರಗಳು ಜನರನ್ನು ಒಲೈಸಲು ಜನಪರ ಬಜೆಟ್ ಹೆಸರಿನಲ್ಲಿ ವಿವಿಧ ಸ್ಕೀಂ ಘೋಷಿಸುತ್ತವೆ. ಆದರೆ ಜನರ ಹಿತದೊಂದಿಗೆ ದೇಶದ ಹಿತ ಕೂಡ ಕಾಯುವ ಬಜೆಟ್ ಮಂಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.