ಆರೋಗ್ಯ ಮತ್ತು ಶಿಕ್ಷಣದ ಅಭಿವೃದ್ಧಿಗೆ ಹಿರಿಯರ ಶ್ರಮ ಕಾರಣ – ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಪೂರ್ವದಲ್ಲಿಯೇ ಆರೋಗ್ಯ ಮತ್ತು ಶಿಕ್ಷಣದ ಕೊರತೆಗಳನ್ನು ನೀಗಿಸುವ ದೃಷ್ಠಿಕೋನವನ್ನು ಗಮನದಲ್ಲಿ ಇಟ್ಟು ಅಂದಿನ ಹಿರಿಯರು ಕಟ್ಟಿರುವಂತಹ ದೂರಗಾಮಿ ಕಲ್ಪನೆಗಳು, ಅವರು ಹಾಕಿರುವ ಯೋಜನೆಗಳು, ಅಂದು ಅವರು ಹಾಕಿದ ಬುನಾದಿ ಇಂದು ಫಲಿತಾಂಶವಾಗಿ ಹೊರ ಬಂದಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಮಂಗಳೂರು ಎಂ.ಜಿ ರಸ್ತೆಯಲ್ಲಿರುವ ದೀಪ ಕಂಫಟ್ರ್ಸ್‍ನಲ್ಲಿ ನಡೆದ ‘ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯ ಪಥ’ ಭಾಗೀದಾರರ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದರು.
ಅಂದಿನ ಹಿರಿಯರ ಪೂರ್ವಯೋಜಿತ ದೃಷ್ಟಿಕೋನವು ದ.ಕ ಮತ್ತು ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮತ್ತು ಆರೋಗ್ಯದಲ್ಲಿ ಮುಂಚೂಣಿಗೆ ಬರಲು ಕಾರಣವಾಗಿದೆ. ಸರ್ಕಾರವು ಈ ಯೋಜನೆಯನ್ನು ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಇಲಾಖೆಗಳು ಪ್ರಾರಂಭಿಕ ಚಟುವಟಿಕೆಯನ್ನು ಕೈಗೆತ್ತಿಕೊಂಡಿದೆ. ಭೌತಿಕ, ಆರ್ಥಿಕ, ಸಾಮಾಜಿಕ ಮತ್ತು ಪರ್ಯಾವರಣದ ಮೂಲಭೂತ ಸೌಕರ್ಯಗಳನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದರು.
ಶಿಕ್ಷಣ ಕ್ಷೇತ್ರಗಳಲ್ಲಿ ಮತ್ತು ಆರೋಗ್ಯದಲ್ಲಿ ಮುಂದೆ ಬರಬೇಕಾದರೆ ಇಂತಹ ಉತ್ತಮ ಕಾರ್ಯಕ್ರಮಗಳು ಮುಖ್ಯವಾಗುತ್ತವೆ. ನಿರ್ದಿಷ್ಟ ಉದ್ದೇಶವನ್ನು ಹೊಂದಿರುವ ಈ ಮಹಾಕಲ್ಪನೆಯ ಯೋಜನೆ ಅಭಿವೃದ್ಧಿಯೆಡೆಗೆ ನಡೆಯಲಿ. ಜ್ಞಾನ ಮತ್ತು ಆರೋಗ್ಯ ಪಥ ಕಾರ್ಯಗಾರದಲ್ಲಿನ ವಿಷಯಗಳು ರಾಜ್ಯಕ್ಕೆ ಗುರುತಿಸಲ್ಪಟ್ಟು, ರಾಷ್ಟ್ರೀಯವಾಗಿ ಬೆಳಕು ಚೆಲ್ಲುವಂತಾಗಲಿ ಎಂದು ಆಶಿಸಿದರು.
ದೂರದೃಷ್ಟಿ ಇಟ್ಟುಕೊಂಡು ಈ ಯೋಜನೆ ರೂಪುಗೊಳ್ಳುತ್ತಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿ ಇಲ್ಲಿಯ ಹಲವಾರು ವಿಚಾರಧಾರೆಗಳನ್ನು ಪಡೆದು ಸಮಾಜದ ಏಳಿಗೆಗೆ ಮುನ್ನುಡಿಯಾಗುವ ಭರವಸೆಯೊಂದಿಗೆ ಸರಕಾರವು ವ್ಯವಸ್ಥಿತವಾದ ಯೋಜನೆಗಳು ಕೈಗೊಳ್ಳಲು ಅನುವುಗೊಳಿಸುವಂತಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದರು.
ದ.ಕ ಜಿಲ್ಲೆಯು ಯಾವುದೇ ಕೊರತೆಗಳು ಇಲ್ಲದೇ ವ್ಯವಸ್ಥಿತವಾಗಿ ಇರುವ ಜಿಲ್ಲೆಯಾಗಿದೆ. ಶೈಕ್ಷಣಿಕವಾಗಿಯೂ ಆರೋಗ್ಯದ ವಿಚಾರದಲ್ಲಿಯೂ ಮುಂದುವರೆದಿದೆ. ಕೆಲವೊಂದು ವಿಚಾರಗಳನ್ನು ಚಿಂತನೆಯಲ್ಲಿಟ್ಟುಕೊಂಡು ಸಮಗ್ರವಾಗಿ ಚರ್ಚಿಸಬೇಕು. ಯಾವುದೇ ಯೋಜನೆ ಬರುವ ಕಾಲಘಟ್ಟದಲ್ಲಿ ಹಲವಾರು ಲೋಪದೋಷಗಳಿಂದ ಅನುಷ್ಠಾನದ ಕೊರತೆ ಕಾಣುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಿ ಮುನ್ನೆಡಿಸಿಕೊಂಡು ಹೋಗಿ ಫಲಾನುಭವಿಗಳಿಗೆ ಇದರ ಪ್ರಯೋಜನ ದೊರಕುವಂತೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿ ವೈ, ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕ ಯು.ಟಿ ಖಾದರ್, ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ಕೆಯುಐಡಿಎಫ್‍ಸಿ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕಿ ಚಾರುಲತಾ ಸೋಮಲ್ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು, ಉಪಸ್ಥಿತರಿದ್ದರು.