ಆಲ್ವಿನ್ ಡಿಸೋಜಾ ಮೇಲೆ ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸಿ – ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹ

Spread the love

ಆಲ್ವಿನ್ ಡಿಸೋಜಾ ಮೇಲೆ ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸಿ – ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹ

ಉಡುಪಿ: ಮರಳು ಮಾಫಿಯಾದ ವಿರುದ್ದ ಧ್ವನಿ ಎತ್ತಿದ್ದ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾಗಿರುವ ಆಲ್ವಿನ್ ಡಿಸೋಜಾ ಅವರ ಮೇಲೆ ದುಷ್ಕರ್ಮಿಗಳಿಂದ ನಡೆದಿರುವ ಮಾರಣಾಂತಿಕ ಹಲ್ಲೆ ಖಂಡನೀಯ. ಕೃತ್ಯವೆಸಗಿರುವ ದುಷ್ಕರ್ಮಿಗಳನ್ನು ಈವರೆಗೆ ಬಂಧಿಸದೇ ಇರುವ ದಕ ಪೊಲೀಸರ ನಡೆ ನಿಜಕ್ಕೂ ಸಂಶಯಗಳಿಗೆ ಕಾರಣವಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹಿಸಿದೆ.

ಆಲ್ವಿನ್ ಅವರು ಒಂದು ಸಾಮಾಜಿಕ ಸಂಘಟನೆಯ ಅಧ್ಯಕ್ಷರಾಗಿದ್ದು ಉಳಿಯ ಪಾವೂರು, ರಾಣಿಪುರ, ಉಳ್ಳಾಲ ಹೊಯ್ಗೆ, 62 ನೇ ತೋಕೂರು ಕೆಂಜಾರು ಈ ಪ್ರದೇಶಗಳ ದ್ವೀಪಗಳನ್ನು ಉಳಿಸುವ ಉದ್ದೇಶದಿಂದ ಸಾರ್ವಜನಿಕರೊಂದಿಗೆ ಸೇರಿಕೊಂಡು ಅಕ್ರಮ ಮರಳುಗಾರಿಕೆಯ ವಿರುದ್ದ ಧ್ವನಿ ಎತ್ತಿದ್ದು ಇದನ್ನು ಸಹಿಸದ ದುಷ್ಕರ್ಮಿಗಳು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇವಲ ಹೇಳಿಕೆಗೆ ಸೀಮಿತವಾಗಿದ್ದು ಈ ಪ್ರಕೃತಿಯನ್ನು ನಾಶಗೊಳಿಸುವವರ ವಿರುದ್ದ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಪರೋಕ್ಷವಾಗಿ ಕೈಜೋಡಿಸಿದಂತೆ ಕಾಣಿಸುತ್ತದೆ. ಘಟನೆ ನಡೆದು ಮೂರು – ನಾಲ್ಕು ದಿನಗಳು ಕಳೆದರೂ ಕೂಡ ದುಷ್ಕರ್ಮಿಗಳನ್ನು ಬಂಧಿಸದೆ ಇರುವುದು ನಾಚೀಕೆಗೇಡಿನ ಸಂಗತಿಯಾಗಿದೆ.
ಅಲ್ಪಸಂಖ್ಯಾತರ ಹಿತ ಕಾಯುವ ಆಶ್ವಾಶನೆ ನೀಡುವ ಸರಕಾರಗಳು ಕೇವಲ ಕಣ್ಣೋರೆಸುವ ತಂತ್ರದಲ್ಲಿಯೇ ತೊಡಗಿದ್ದು ಬಿಟ್ಟರೆ ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಅನ್ಯಾಯದ ವಿರುದ್ದ ದನಿಯೆತ್ತಿದವರನ್ನು ಹಲ್ಲೆಗಳ ಮೂಲಕ ದಮನಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಕೂಡಲೇ ಆಲ್ವಿನ್ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಬಂಧಿಸುವ ಕೆಲಸ ಜಿಲ್ಲಾಡಳಿತ ನಡೆಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಕಥೊಲಿಕ್ ಸಭಾ ಸಂಘಟನೆ ಎರಡು ಜಿಲ್ಲೆಯ ಜನರನ್ನು ಸೇರಿಸಿಕೊಂಡು ಪ್ರತಿಭಟಿಸುವ ಕೆಲಸ ಮಾಡಲಿದೆ. ಈ ಪ್ರಕೃತಿಯನ್ನು ನಾಶಗೊಳಿಸುವವರ ವಿರುದ್ದ ನಮ್ಮ ಮೇಲೆ ಇನ್ನೆಷ್ಟು ಹಲ್ಲೆ ನಡೆಸಿದರೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love