ಆಳ್ವಾಸ್‍ನ ಮನುಜ ನೇಹಿಗನಿಗೆ ರಂಗ ಸವ್ಯಸಾಚಿ ಬಿರುದು
ಮೂಡುಬಿದಿರೆ: ಬಿ.ಇ.ಎಂ.ಎಲ್. ಮೈಸೂರು ಇದರ ದ.ಕ.ಜಿಲ್ಲಾ ಒಕ್ಕೂಟವು ಆಳ್ವಾಸ್ ವಿದ್ಯಾರ್ಥಿ ಮನುಜ ನೇಹಿಗನಿಗೆ ರಂಗ ಸವ್ಯಸಾಚಿ ಬಿರುದು ನೀಡಿ ಗೌರವಿಸಿದೆ.
ಯಕ್ಷಗಾನ,ನಾಟಕ,ಸಂಗೀತ,ಮಣಿಪುರಿ ಸ್ಟಿಕ್ ಡ್ಯಾನ್ಸ್,ಭರತನಾಟ್ಯ,ವಾದ್ಯ ಪರಿಕರಗಳನ್ನು ನುಡಿಸುವುದು,ಜಾದೂ ಪ್ರದರ್ಶನ,ರಷ್ಯನ್ ರಿಂಗ್,ಪುರುಲಿಯಾ ಸಿಂಹ ನೃತ್ಯ,ಜನಪದ ಕುಣಿತ,ಕಥಾಭಿನಯ..ಹೀಗೆ ಹಲವು ಸಾಂಸ್ಕೃತಿಕ ಸಂಗತಿಗಳಲ್ಲಿ ತೊಡಗಿಸಿಕೊಂಡ ಮನುಜ ನೇಹಿಗನ ವಿಶೇಷ ಪ್ರತಿಭೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.
ಬಿರುದು ಪ್ರದಾನಕ್ಕಿಂತ ಮೊದಲು ನೇಹಿಕ ಪ್ರದರ್ಶಿಸಿದ ದಶ ಕಲಾ ಕೌಶಲ ಕಾರ್ಯಕ್ರಮವು ಮೈಸೂರು ಕಲಾಮಂದಿರದಲ್ಲಿ ಸೇರಿದ್ದ ಸಾವಿರಕ್ಕಂತಲೂ ಹೆಚ್ಚು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಬಿ.ಇ.ಎಂ.ಎಲ್.ನ ಪ್ರಧಾನ ವ್ಯವಸ್ಥಾಪಕರಾದ ಹೆಚ್.ಎಸ್.ರಂಗನಾಥ್ ಹಾಗೂ ಬೆಮೆಲ್ ದ.ಕ.ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಮೋಹನದಾಸ್ ಪ್ರಭು ಬಿರುದು ಪ್ರದಾನ ಮಾಡಿದರು..ದ.ಕ.ಜಿಲ್ಲಾ ಸಂಘ ಮೈಸೂರು ಅಧ್ಯಕ್ಷ ವಿ.ಶ್ರೀನಿವಾಸ ರಾವ್, ಅತಿಥಿಗಳಾದ ಪಿ.ರಮೇಶ್,ಒಕ್ಕೂಟದ ಉಪಾಧ್ಯಕ್ಷ ಆಲ್ಬರ್ಟ್ ಸಲ್ದಾನ,ಕಾರ್ಯದರ್ಶಿ ಪಿ.ಹರಿಶ್ಚಂದ್ರ,ಸದಸ್ಯರಾದ ಬಿ.ಚಿನ್ನಪ್ಪ, ಜನಾರ್ದನ್, ಕೃಷ್ಣಮೂಲ್ಯ ಮತ್ತು ಕಾರ್ಯಕ್ರಮ ಸಂಯೋಜಕ ಜಯಚಂದ್ರ ಎ.ಉಪಸ್ಥಿತರಿದ್ದರು.
ಮೂಡಬಿದಿರೆಯ ಆಳ್ವಾಸ್ ಪ್ರಾಥಮಿಕ ಶಾಲಾ ಐದನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ರೂವಾರಿ ಜೀವನ್ ರಾಂ ಸುಳ್ಯ ಹಾಗೂ ಉಪನ್ಯಾಸಕಿ ಡಾ.ಮೌಲ್ಯ ಜೀವನ್ ರಾಂ ರವರ ಪುತ್ರ.
ಕಿರಿಯ ವಯಸ್ಸಿನಲ್ಲೇ ಈ ಗೌರವಕ್ಕೆ ಪಾತ್ರನಾದ ಮನುಜ ನೇಹಿಗನನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.