ಆಳ್ವಾಸ್ ಚಿತ್ರಸಿರಿ ವ್ಯಂಗ್ಯಚಿತ್ರಸಿರಿ, ಛಾಯಾಚಿತ್ರಸಿರಿ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ನುಡಿಸಿರಿ 2018 ಅಂಗವಾಗಿ ನಡೆದ 2018ರ ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ ಹಾಗೂ ವ್ಯಂಗ್ಯಚಿತ್ರಸಿರಿ ರಾಜ್ಯಮಟ್ಟದ ಕಲಾಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಅವರಿಗೆ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ, ಹಿರಿಯ ಛಾಯಾಚಿತ್ರ ಕಲಾವಿದ ಎಸ್.ತಿಪ್ಪೇಸ್ವಾಮಿ ಮೈಸೂರು ಅವರಿಗೆ ಆಳ್ವಾಸ್ ಛಾಯಾಚಿತ್ರಸಿರಿ 2018 ಪ್ರಶಸ್ತಿ ಹಾಗೂ ಹಿರಿಯ ವ್ಯಂಗ್ಯಚಿತ್ರಕಾರ ಕೆ.ಆರ್ ಸ್ವಾಮಿ ಅವರಿಗೆ ಅಳ್ವಾಸ್ ವ್ಯಂಗ್ಯಚಿತ್ರಸಿರಿ 2018 ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.ಛಾಯಾಚಿತ್ರಸಿರಿ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಲಾವಿದರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮಾತನಾಡಿ,ವಿದ್ಯಾರ್ಥಿಗಳು ಕೇವಲ ಪಠ್ಯದ ವಿಷಯವನ್ನೇ ಕಲಿಯುವುದಲ್ಲ. ಕಲೆ, ಸಂಸ್ಕøತಿ, ನಮ್ಮ ಪರಂಪರೆಯ ಬಗ್ಗೆಯೂ ಜ್ಞಾನ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಳ್ವಾಸ್ ನುಡಿಸಿರಿ, ವಿರಾಸತ್‍ಗಳನ್ನು ಆಯೋಜಿಸುತ್ತಿದೆ. ಚಿತ್ರಸಿರಿ, ವ್ಯಂಗ್ಯಚಿತ್ರಸಿರಿ, ಕೃಷಿಸಿರಿ, ಛಾಯಾಚಿತ್ರಸಿರಿಯ ಮೂಲಕ ವಿದ್ಯಾರ್ಥಿಗಳಲ್ಲಿ ಮನಸ್ಸು ಕಟ್ಟುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಇದನ್ನು ಆಸ್ವಾಧಿಸಬೇಕು. ಈ ಮೂಲಕ ತಮ್ಮ ಜೀವನವನ್ನು ಮೇಲ್ದರ್ಜೆಗೇರಿಸಬೇಕು. ಇದರಿಂದ ಅಮೂಲ್ಯವಾದ ಚಿಂತನೆಗಳು ನಮ್ಮಲ್ಲಿ ಅರಳಿ ಶುದ್ಧ ಮನಸ್ಸು, ಸೌಂದರ್ಯಪ್ರಜ್ಞೆ ನಮ್ಮಲ್ಲಿ ಮೊಳಕೆಯೊಡೆಯುತ್ತದೆ ಎಂದರು.
ಪತ್ರಕರ್ತ ಬಾಲಕೃಷ್ಣ ಪುತ್ತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಚಿತ್ರಸಿರಿ ಸಲಹಾ ಸಮಿತಿಯ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ, ಪುರುಷೋತ್ತಮ ಅಡ್ವೆ, ವ್ಯಂಗ್ಯಚಿತ್ರ ಸಿರಿ ಸಲಹಾ ಸಮಿತಿಯ ಸದಸ್ಯರಾದ ವಿ.ಆರ್ ಚಂದ್ರಶೇಖರ್, ನಾಗನಾಥ್ ಜಿ.ಎಸ್, ಜೀವನ್ ಶೆಟ್ಟಿ ಉಡುಪಿ, ಛಾಯಾಚಿತ್ರಸಿರಿ ಸಲಹಾ ಸಮಿತಿಯ ಯಜ್ಞ ಮಂಗಳೂರು ಉಪಸ್ಥಿತರಿದ್ದರು.
ಉಪನ್ಯಾಸಕ ಉದಯ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಆಸ್ಟ್ರೋ ಮೋಹನ್ ಪ್ರಶಸ್ತಿ ಪತ್ರ ವಾಚಿಸಿದರು.