ಆಳ್ವಾಸ್ ಚಿತ್ರಸಿರಿ: 11ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಚಾಲನೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ನುಡಿಸಿರಿಯ ಪೂರ್ವಭಾವಿಯಾಗಿ ನಾಲ್ಕು ದಿನಗಳ ಕಾಲ ನಡೆಯುವ `ಆಳ್ವಾಸ್ ಚಿತ್ರಸಿರಿ 2018′ 11ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರವು ಪುತ್ತಿಗೆಯ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆರಂಭಗೊಂಡಿತು.
ಮಂಗಳೂರಿನ ಹಿರಿಯ ಉದ್ಯಮಿ ಬಿ.ಆರ್ ಸೋಮಯಾಜಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಮನಸ್ಸನ್ನು ಅರಳಿಸುವ ಶಕ್ತಿ ಕಲೆಗಿದೆ. ಚಿತ್ರಕಲೆ ಶಿಕ್ಷಣದ ಬುನಾದಿಯಾಗಿದ್ದು ಅಂತಹ ಚಿತ್ರಕಲೆಯನ್ನು ಪ್ರೋತ್ಸಾಹಿಸಿ ಅದಕ್ಕೆ ಗೌರವ ತಂದು ಕೊಡುವ ಕೆಲಸ ಆಳ್ವಾಸ್ ಸಂಸ್ಥೆಯಿಂದಾಗುತ್ತಿದೆ ಎಂದು ಪ್ರಶಂಸಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಒಂದು ಗ್ರಂಥದಲ್ಲಿ ಸಿಗುವ ವಿಚಾರಗಳು ಒಂದು ಕಲಾಕೃತಿಯಲ್ಲಿ ಸಿಗುತ್ತದೆ. ಆಳ್ವಾಸ್ ನುಡಿಸಿರಿಯು ಭಾಷೆ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೆ ಕಲೆಯ ವಿವಿಧ ಪ್ರಕಾರಗಳು, ಕೃಷಿ ವಿಜ್ಞಾನ ಸಹಿತ ಎಲ್ಲಾ ವಿಚಾರಗಳನ್ನು ಆನಾವರಣಗೊಳಿಸುತ್ತಿದೆ. ಕಲಾವಿದರೊಳಗೆ ಕೊಡುಕೊಳ್ಳುವ ಪ್ರಕ್ರಿಯೆ ನಡೆಯಬೇಕು. ಇದರಿಂದ ಕಲಾವಿದರೂ ಬೆಳೆಯುತ್ತಾರೆ ಕಲೆಯೂ ಬೆಳೆಯುತ್ತದೆ.
ಚಿತ್ರಸಿರಿಯಲ್ಲಿ ನೂರಾರು ಕಲಾವಿದರು ಚಿತ್ರಿಸಿದ ಐದು ಸಾವಿರಕ್ಕೂ ಅಧಿಕ ಕಲಾಕೃತಿಗಳು ಆಳ್ವಾಸ್ ಸಂಗ್ರಹದಲ್ಲಿದ್ದು ಆಳ್ವಾಸ್ ಕ್ಯಾಂಪಸ್‍ನಲ್ಲಿ ಪ್ರದರ್ಶನದಲ್ಲಿದೆ. ಚಿತ್ರಸಿರಿಯಲ್ಲಿ ರಚನೆಗೊಂಡ ಕಲಾಕೃತಿಗಳನ್ನು ಆಯ್ದ ಛಾಯಾಚಿತ್ರಗಳನ್ನು ಪ್ರದರ್ಶಸಲಾಗುವುದು ಎಂದರು.
ಶಿಬಿರದ ಸಲಹಾ ಸಮಿತಿಯ ಸದಸ್ಯರುಗಳಾದ ಕೋಟಿ ಪ್ರಸಾದ್ ಆಳ್ವ, ಪುರುಷೋತ್ತಮ ಅಡ್ವೆ, ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರಸಿರಿಯಲ್ಲಿ ಪಾಲ್ಗೊಂಡ 26 ಕಲಾವಿದರಿಗೆ ಬಣ್ಣದ ಪರಿಕರಗಳನ್ನು ಮೋಹನ ಆಳ್ವ ವಿತರಿಸಿದರು.
ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.