‘ಆಳ್ವಾಸ್ ನ್ಯೂಟ್ರಿಷನ್ ಸೆಂಟರ್’ನ ಉದ್ಘಾಟನೆ
ಮೂಡಬಿದಿರೆ: ಆರೋಗ್ಯವನ್ನು ಕಾಪಾಡಲು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು ಅತ್ಯಗತ್ಯ. ಇಂತಹ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದರೂ, ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡುವ ಹಿನ್ನಲೆಯಲ್ಲಿ ಸೇವಿಸಬೇಕು ಎಂದು ಆಳ್ವಾಸ್ ಸ್ನಾತಕೋತ್ತರ ಕಾಲೇಜಿನ ಆಹಾರ ವಿಜ್ಞಾನ ಮತ್ತು ನ್ಯೂಟ್ರಿಷಿಯನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ತಿಳಿಸಿದರು.
ಇವರು ಮೂಡಬಿರೆಯ ಆಳ್ವಾಸ್ ಹೆಲ್ತ್ ಸೆಂಟರ್‍ನಲ್ಲಿ ಆರಂಭಗೊಂಡ ‘’ಆಳ್ವಾಸ್ ನ್ಯೂಟ್ರಿಷನ್ ಸೆಂಟರ್’’ನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಮಗೆ ಗ್ರೀನ್ ಟೀ, ವೇ ಪ್ರೋಟಿನ್, ಫ್ಲೆಕ್ಸ್ ಸೀಡ್ಸ್ ಮತ್ತು ಹಾಲಿನ ಅಂಶವುಳ್ಳ ಉತ್ಪನ್ನಗಳನ್ನು ಸೇವಿಸುವುದರಿಂದ ಪ್ರೊಟೀನ್ ಅಂಶಗಳು ದೊರೆಯುತ್ತವೆ. ಪ್ರೋಟೀನ್‍ಯುಕ್ತ ಆಹಾರಗಳು ಮನುಷ್ಯನನ್ನು ಅನಾರೋಗ್ಯದಿಂದ ತಡೆಗಟ್ಟುವ ಗುಣಗಳನ್ನು ಹೊಂದಿರುತ್ತದೆ. ಆದ್ದರಿಂದ ದೈನಂದಿನ ಜೀವನದಲ್ಲಿ ಇವುಗಳನ್ನು ಹೆಚ್ಚು ಸೇವಿಸಬೇಕು ಎಂದರು.
ಅಂತರಾಷ್ಟ್ರೀಯ ವೈಟ್ ಲಿಫ್ಟರ್ ಪುಷ್ಪರಾಜ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಈ ನ್ಯೂಟ್ರಿಷನ್ ಸೆಂಟರ್‍ನಲ್ಲಿ ಜಿಮ್ ಪ್ರೊಡಕ್ಟ್ಸ್, ಆರೋಗ್ಯವರ್ಧಕ ಪೌಷ್ಟಿಕಾಂಶ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಮಕ್ಕಳ ಆರೋಗ್ಯವರ್ಧಕ ಉತ್ಪನ್ನಗಳು, ಮಧುಮೇಹ ನಿಯಂತ್ರಣ ಆಹಾರ ಉತ್ಪನ್ನಗಳು ಆಕರ್ಷಕ ಬೆಲೆಯಲ್ಲಿ ಲಭಿಸುತ್ತವೆ. ಜತೆಗೆ ಆಹಾರ ತಜ್ಞರು ಉಚಿತವಾಗಿ ಸಲಹೆಯನ್ನು ನೀಡುತ್ತಾರೆ.
ಆಳ್ವಾಸ್ ಹೆಲ್ತ್ ಸೆಂಟರ್‍ನ ಆಡಳಿತ ನಿರ್ದೇಶಕ ಡಾ. ವಿನಯ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಆಳ್ವಾಸ್ ಹೆಲ್ತ್ ಸೆಂಟರ್‍ನ ವೈದ್ಯಕೀಯ ತಜ್ಞ ಡಾ. ಸದಾನಂದ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಳ್ವಾಸ್ ಪುನರ್ಜನ್ಮ ದುಶ್ಚಟ ನಿವಾರಣಾ ಕೇಂದ್ರದ ಮೇಲ್ವಿಚಾರಕರಾದ ರಾಮ ಪ್ರಸಾದ ಕಾರ್ಯಕ್ರಮ ನಿರ್ವಹಿಸಿದರು.