ಆಳ್ವಾಸ್ ನ್ಯೂಸ್ ಟೈಮ್ ನ ಶತಕದ ಸಂಭ್ರಮ
ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು ಎಂದೂ ಪ್ರವೇಶಿಸಬಾರದು ಎಂದು ರಾಜ್ ನ್ಯೂಸ್‍ನ ಮುಖ್ಯ ಸಂಪಾದಕ ಹಮೀದ್ ಪಾಳ್ಯ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ನ್ಯೂಸ್ ಟೈಮ್‍ನ ಶತಕದ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇಂದು ಪತ್ರಿಕೋದ್ಯಮದ ಮೇಲೆ ರಾಜಕೀಯ ಹೆಚ್ಚು ಪ್ರಭಾವ ಬೀರುತ್ತಿದೆ. ಆದ್ದರಿಂದ ಪತ್ರಕರ್ತ ಯಾವುದೇ ರಾಜಕೀಯ ಸಿದ್ಧಾಂತಗಳಿಗೆ ಸೀಮಿತವಾಗದೇ ಸ್ವಾತಂತ್ರ್ಯ ವಾಗಿ ಕೆಲಸ ಮಾಡಬೇಕು. ಅಲ್ಲದೆ ಪತ್ರಕರ್ತರು ಮಾಡುವ ಎಲ್ಲ ಚಟುವಟಿಕೆಗಳು ಮತ್ತು ಹೇರುವ ಅಲೋಚನೆಗಳು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಪತ್ರಕರ್ತರಾದವನಿಗೆ ಅಹಂಕಾರವಿರಬೇಕು, ಅದು ವಿಷಯ ಜ್ಞಾನದ್ದಾಗಿರಬೇಕು. ಆದರೆ ಅದು ಎಂದೂ ದುರಂಕಾರದ ಸ್ವರೂಪ ಪಡೆಯಬಾರದು. ಅಧ್ಯಯನ ಹಾಗೂ ವಿದ್ವತ್ತಿನ ಹೊರತು ಬೇರೆ ಯಾವುದೂ ಪತ್ರಕರ್ತನಾದವನನ್ನು ಗಟ್ಟಿಗೊಳಿಸಲಾರವು. ಅಲ್ಲದೆ, ಪತ್ರಿಕೋದ್ಯಮ ಎಂದೂ ಎಯ್ಟ್ ಟು ಫೈ ನೌಕರಿ ಆಗಲಾರದು, ಆ ವೃತ್ತಿಯೆಡೆಗೆ ಪ್ಯಾಶನೇಟ್ ಆಗಿದ್ದಾಗ ಮಾತ್ರ ಇಲ್ಲಿ ಹೆಚ್ಚು ಕಾಲ ನೆಲೆ ನಿಲ್ಲಬಹುದು. ಆ ಮೂಲಕ ಜನಸಾಮಾನ್ಯರ ಪ್ರತಿನಿಧಿಗಳಾಗಿ ಈ ಸಮಾಜ ಸ್ವಾಸ್ತ್ಯವನ್ನು ಕಾಪಾಡುವ ಕೆಲಸ ಮಾಡಬಹುದು ಎಂದರು.
ಆಳ್ವಾಸ್ ಕಾಲೇಜಿನ ಸ್ನಾತಕೋತರ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಪ್ರಸ್ತಾವಿಕ ನುಡಿಗಳನ್ನಾಡಿ, ಐದು ವರ್ಷಗಳ ಹಿಂದೆ ಚಿಗುರಿದ್ದ ಆಳ್ವಾಸ್ ನ್ಯೂಸ್ ಟೈಮ್ ಎನ್ನುವ ಚಿಕ್ಕ ಕನಸ್ಸು ಇಂದು ಹೆಮ್ಮರವಾಗಿ ನಿಂತಿದೆ. ಈ ಹಿಂದೆ ಪತ್ರಿಕೋದ್ಯಮದಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳತ್ತ ಮಾತ್ರ ಹೋಗುತ್ತಿದ್ದರು. ಆದರೆ ಇಂದು ದೃಶ್ಯಮಾಧ್ಯಮಗಳತ್ತ ವಿದ್ಯಾರ್ಥಿಗಳು ಒಲವು ಹೆಚ್ಚಾಗಿದೆ. ಇದಕ್ಕೆ ಬೇಕಾದ ರೀತಿಯಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪ್ರಾಯೋಗಿಕ ಕಲಿಕೆಗೆ ಒತ್ತುಕೊಟ್ಟು ಸುಸಜ್ಜಿತವಾದ ಸ್ಟೋಡಿಯೋ ವ್ಯವಸ್ಥೆಯನ್ನು ಕಲ್ಪಿಸಿ ವಿದ್ಯಾರ್ಥಿಗಳ ಆಸಕ್ತಿಯ ವಿಷಯಗಳನ್ನು ಕಲಿಸಲಾಗುತ್ತಿದೆ ಎಂದರು.
ಕಾರ್ಯಕ್ರದಲ್ಲಿ ಆಳ್ವಾಸ್ ಮಲ್ಟಿಮೀಡಿಯಾದಿಂದ ರಚಿಸಿಲಾಗಿದ್ದ `ಅಕ್ಷರಯೋಗಿ ಹರೇಕಳ ಹಾಜಬ್ಬ’ ಎಂಬ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. 2018ನೇ ಸಾಲಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮದಲ್ಲಿ ರ್ಯಾಂಕ್ ಪಡೆದ ಅಶ್ವಿನಿ ಜೈನ್, ಪ್ರಫುಲ್ಲ, ನರೇಂದ್ರ ಮತ್ತು ಫಾಜಿಲ್‍ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಮೀದ್ ಪಾಳ್ಯ ಪತ್ರಿಕೋದ್ಯಮದ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಅಳ್ವಾಸ್‍ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಫಸ್ಟ್ ನ್ಯೂಸ್‍ನ ವರದಿಗಾರ ವಾಸುದೇವ್ ಭಟ್, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರಸಾದ್ ಶೆಟ್ಟಿ, ದೇವಿಶ್ರೀ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಗೌರಿ ಜೋಷಿ ನಿರೂಪಿಸಿದರು. ಡಾ ಶ್ರೀನಿವಾಸ ಹೊಡೆಯಾಲ ವಂದಿಸಿದರು.