ಆಳ್ವಾಸ್ ವರ್ಣ ವಿರಾಸತ್ 2019 ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರಕ್ಕೆ ಚಾಲನೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ 25ನೇ ವರ್ಷದ ಆಳ್ವಾಸ್ ವಿರಾಸತ್ ಗೆ ಪೂರಕವಾಗಿ ಜ.1ರಿಂದ 6ರವರೆಗೆ ನಡೆಯಲಿರುವ ಆಳ್ವಾಸ್ ವರ್ಣ ವಿರಾಸತ್ 2019 ರಾಷ್ಟ್ರ ಮಟ್ಟದ ಚಿತ್ರಕಲಾ ಶಿಬಿರಕ್ಕೆ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಮೂಡುಬಿದಿರೆ ಶ್ರೀಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕಲಾಶಿಬಿರಕ್ಕೆ ಚಾಲನೆ ನೀಡಿ, ಸಮಾಜ ಮಾತ್ರವಲ್ಲದೆ, ನಮ್ನೊಳಗೆ ಕೂಡ ಹಲವಾರು ಸಂಘರ್ಷಗಳು ನಡೆಯುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಸಂದೇಶಗಳತ್ತ ಒತ್ತು ನೀಡುವುದು ಮುಖ್ಯ. ಪ್ರತಿಯೊಬ್ಬ ಚಿತ್ರಕಲಾವಿದನ ಕುಂಚದಿಂದ ಅರಳುವ ಕಲೆಯಲ್ಲಿ ಸಂಘರ್ಷವನ್ನು ದೂರ ಮಾಡುವ ಶಕ್ತಿಯಿದೆ. ಸಂದೇಶಗಳ ಮೂಲಕಸಂಘರ್ಷಗಳ ದೂರವಾದಾಗ ಸಾಮಾಜಿಕವಾಗಿ ಸಾಮರಸ್ಯ ಬೆಳೆಯುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿ, ದೇಶದ ವಿವಿಧ ರಾಜ್ಯಗಳಿಂದ ಶಿಬಿರದಲ್ಲಿ ಭಾಗವಹಿಸಿದ ಕಲಾವಿದರಿಗೆ ಕುಂಚ ಪರಿಕರಗಳನ್ನು ನೀಡಿ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು, ಕಲೆಯನ್ನು ಉಳಿಸಿ, ಬೆಳೆಸುವುದು ಮುಖ್ಯ. ಅಂತಹ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಳ್ವಾಸ್ ವಿರಾಸತ್ ಮೂಲಕ ಕಳೆದ 24 ವರ್ಷಗಳಿಂದ ಮಾಡುತ್ತ ಬಂದಿದೆ. ಅದರೊಂದಿಗೆ ಕಳೆದ 10 ವರ್ಷದಿಂದ ಆಳ್ವಾಸ್ ವರ್ಣವಿರಾಸತ್, ಶಿಲ್ಪ ವಿರಾಸತ್ ಮೂಲಕ ಚಿತ್ರ ಹಾಗೂ ಶಿಲ್ಪ ಕಲಾವಿದರಿಗೆ ಮನ್ನಣೆ ನೀಡುತ್ತಿದೆ. ಕಲಾವಿದರಿಂದ ರಚಿತವಾದ 6 ಸಾವಿರದ ಹೆಚ್ಟು ಕಲಾಕೃತಿಗಳನ್ನು ಕ್ಯಾಂಪಸ್‍ನಲ್ಲೇ ಸಂರಕ್ಷಿಸಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಲ್ಲಿರುವ ಕಲಾಕೃತಿಗಳನ್ನು ಸೂಕ್ಷವಾಗಿ ಗಮನಿಸಿ, ಪ್ರಜ್ಞಾವಂತ ಮನಸ್ಸನ್ನು ಕಟ್ಟಿಕೊಳ್ಳಬೇಕು ಎಂದರು.
ಕಾಷ್ಠ ಕಲಾವಿದ ರಾಮಮೂರ್ತಿ, ಟೆರಕೋಟಾ ಕಲಾವಿದ ಉಲ್ಲಾಸ್ ಕರ್ದೆ, ಶಿಬಿರ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ದೀಕ್ಷಾ ಗೌಡ ಕಾರ್ಯಕ್ರಮ ನಿರೂಪಿಸಿದರು.