ಆಶಾ ಕಾರ್ಯಕರ್ತೆ ರಾಜೀವಿಯಿಂದ ರಾಖಿ ಕಟ್ಟಿಸಿಕೊಂಡ ಜಿಲ್ಲಾಧಿಕಾರಿ ಜಿ ಜಗದೀಶ್
ಉಡುಪಿ: ಗರ್ಭಿಣಿ ಮಹಿಳೆಯನ್ನು ರಾತ್ರಿ 3 ಗಂಟೆ ಸುಮಾರಿಗೆ ತನ್ನ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಉಡುಪಿಯ ಆಶಾ ಕಾರ್ಯಕರ್ತೆ ರಾಜೀವಿ ಅವರು ರಕ್ಷಾ ಬಂಧನ ಪ್ರಯಕ್ತ ಜಿಲ್ಲಾಧಿಕಾರಿ ಜಿ ಜಗದೀಶ್ ಅವರಿಗೆ ರಾಕಿ ಕಟ್ಟಿದ್ದು, ರಾಜೀವಿ ಸೇವೆಯನ್ನು ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.
ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರಾಜೀವಿ ಅವರು ಜಿಲ್ಲಾಧಿಕಾರಿಗೆ ರಾಕಿ ಕಟ್ಟುವ ಫೋಟೊವನ್ನು ಹಾಕಿದ್ದು, “ಇವರು ಗರ್ಭಿಣಿಯನ್ನು ರಾತ್ರಿ ಆಟೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ದಿಟ್ಟ ಆಶಾ ಕಾರ್ಯಕರ್ತೆ ಇವರು ರಾಖಿ ಕಟ್ಟಿದ ಕ್ಷಣ ನಿಜಕ್ಕೂ ಸಹ ಕರೋನಾ ಎದುರಿಸಲು ಇನ್ನಷ್ಟು ಧೈರ್ಯ ಬಂದಿದೆ” ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಬರೆದುಕೊಂಡಿದ್ದಾರೆ.
ರಾಜೀವಿ ಅವರು ರಾತ್ರಿ 3 ಗಂಟೆ ಸುಮಾರಿಗೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರು ಸ್ಥಳೀಯ ಆಶಾ ಕಾರ್ಯಕರ್ತೆ ರಾಜೀವಿ (53) ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ತಮ್ಮ ಆಟೊವನ್ನು ಸ್ವತಃ ಚಲಾಯಿಸಿಕೊಂಡು ಬಂದ ರಾಜೀವಿ ಅವರು ಗರ್ಭಿಣಿಯನ್ನು ಪೆರ್ಣಂಕಿಲ ಗ್ರಾಮದಿಂದ ಉಡುಪಿ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರಾಜೀವಿ ಅವರ ಸೇವೆ ಎಲ್ಲರ ಪ್ರಶಂಸೆಗೆ ಕಾರಣವಾಗಿದ್ದು, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕೂಡ ಈ ಬಗ್ಗೆ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದರು.