ಆಹಾರ ಸುರಕ್ಷತೆ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡು ವರದಿ ನೀಡಿ-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ತಂಬಾಕು ನಿಯಂತ್ರಣದ ಜೊತೆಗೆ ಆಹಾರ ಸುರಕ್ಷತೆ ಬಗ್ಗೆ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಸಮಿತಿ ಸ್ವಯಂ ಪ್ರೇರಿತವಾಗಿ ಕಾಳಜಿ ವಹಿಸಿ ಕ್ರಮತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಸಭೆ ಹಾಗೂ ಹಾಲಿನ ಗುಣಮಟ್ಟದ ಜಿಲ್ಲಾ ಮಟ್ಟದ ಸಮಿತಿ ಸಭೆ ಹಾಗೂ ನೀರಿನ ಘಟಕದ ಕಾರ್ಯನಿರ್ವಹಣೆಯ ಜಿಲ್ಲಾ ಮಟ್ಟದ ತನಿಖಾದಳದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬೇಕರಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಇತರ ಜಿಲ್ಲೆಗಳಿಂದ ವರದಿಗಳು ಬಂದಿದ್ದು, ಗ್ರಾಹಕರು ಅಥವಾ ಸಾರ್ವಜನಿಕರಿಂದ ದೂರುಗಳಿಗಾಗಿ ಕಾಯದೆ ಸ್ವಯಂಪ್ರೇರಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸಿ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಆಚರಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಡಾ ವಾಸುದೇವ ಉಪಾಧ್ಯಾಯ ಅವರು, ಪ್ರಸಕ್ತ ಸಾಲಿನ ಧ್ಯೇಯ ವಾಕ್ಯವಾದ ‘ತಂಬಾಕು ಮತ್ತು ಹೃದಯದ ಕಾಯಿಲೆಗಳು’ ಕುರಿತು ಟ್ರಿನಿಟಿ ಕೈಗಾರಿಕಾ ಸಂಸ್ಥೆ ಉದ್ಯಾವರದಲ್ಲಿ ಜಾಗೃತಿ ಅಭಿಯಾನ ಕಾರ್ಯಕ್ರಮ ಆಯೋಜಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಕೆ ಎಮ್ ಸಿ ಮಣಿಪಾಲದ ಸಮುದಯ ವೈದ್ಯಕೀಯ ಆರೋಗ್ಯ ವಿಭಾಗದ ವರದಿಯನ್ನು ಮಂಡಿಸಲಾಯಿತು. ವರದಿಯಲ್ಲಿ ಕೆ ಎಂಸಿಯ ಡಾ ಮುರಳೀಧರನ್ ಅವರು ತಂಬಾಕು ನಿಯಂತ್ರಣ ಕಾಯಿದೆ ಅನುಷ್ಠಾನದ ಜೊತೆಗೆ ಇತರೆ ತಂಬಾಕಿನಿಂದ ತಯಾರಿಸಲ್ಪಡುವ ಉಪಉತ್ಪನ್ನಗಳ ಬಗ್ಗೆಯೂ ಜಿಲ್ಲೆಯಲ್ಲಿ ಸಾಕಷ್ಟು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಂಬಾಕು ಮಾರಾಟ ಮಾಡುವ ಒಟ್ಟು 155 ಮಾರಾಟಗಾರರು ಮತ್ತು 465 ಧೂಮಪಾನ ಮಾಡುವವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಇವರಲ್ಲಿ ಶೇಕಡಾ 50 ಮಾರಾಟಗಾರರಿಗೆ ತಂಬಾಕಿನಿಂದ ಸಂಭವಿಸುವ ಮಾರಕ ರೋಗಗಳ ಬಗ್ಗೆ ಸಾಕಷ್ಟು ಅರಿವಿದೆ. ಅದೇ ರೀತಿ ಶೇಕಡ 40 ಧೂಮಪಾನ ಮಾಡುವವರಿಗೂ ಧೂಮಪಾನ ಆರೋಗ್ಯ ಮಾರಕ ಎಂಬುದರ ಅರಿವಿದೆ ಎಂದರು.
ಟಿವಿ ಚಾನೆಲ್‍ಗಳಲ್ಲಿ ನಿಕೊಟಿನ್‍ಗಮ್ಷ್ ಬಗ್ಗೆ ಬರುವ ಜಾಹೀರಾತುಗಳ ಬಗ್ಗೆ ಸಭೆಯ ಗಮನ ಸೆಳೆದ ಜಿಲ್ಲಾಧಿಕಾರಿಗಳು ಈ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನಸೆಳೆಯಲು ಸೂಚಿಸಿದರು.
ಇದೇ ರೀತಿ ಜಿಲ್ಲೆಯ ಕೆಲವೆಡೆ ಬ್ರಾಂಡೆಡ್ ಅಲ್ಲದ ಸಿಗರೇಟ್‍ಗಳು ಪತ್ತೆಯಾಗಿರುವುದರ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳುಸೂಚಿಸಿದರು.
ತಂಬಾಕು ನಿಯಂತ್ರಣಗಳ ಬಗ್ಗೆ ಅರಿವು ಮೂಡಿಸಲಾಗಿದ್ದು, ಒಟ್ಟು 915 ಶಾಲೆಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ಶಾಲೆಗಳಲ್ಲಿ ಈ ಬಗ್ಗೆ ಇನ್ನಷ್ಟು ಅರಿವು ಮೂಡಿಸಲು ಶಾಲೆಯ ಎಸ್‍ಡಿಎಂಸಿಗಳ ಜೊತೆ ಚರ್ಚಿಸಿ ಶೈಕ್ಷಣಿಕ ಪಠ್ಯದ ಭಾಗವಾಗಿ ಅರೋಗ್ಯ ಮಾಹಿತಿಯನ್ನು ವಾರದಲ್ಲಿ ಒಂದು ದಿನ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕದಲ್ಲಿ ವರ್ಷಕ್ಕೊಮ್ಮೆ ರಾಸಾಯಿನಿಕ ಪರೀಕ್ಷೆ ಮತ್ತು ಆರು ತಿಂಗಳಿಗೊಮ್ಮೆ ಮೈಕ್ರೊ ಬಯಾಲಾಜಿ ಪರೀಕ್ಷೆ ನಡೆಸಲೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅದೇ ರೀತಿ ಹೊಟೆಲುಗಳು, ಬೀದಿ ಬದಿ ವ್ಯಾಪಾರಿಗಳು, ಬೇಕರಿಗಳನ್ನು ತಪಾಸಣೆ ಮಾಡಿ ಪ್ರತಿ ತಿಂಗಳಿಗೊಮ್ಮೆ ವರದಿಯನ್ನು ನೀಡುವಂತೆ ಸೂಚನೆಗಳನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರೋಹಿಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗ್ರೇಸಿ ಗೊನ್ಸ್ವಾಲಿಸ್ ಅವರನ್ನೊಳಗೊಂಡಂತೆ ಆರೋಗ್ಯ ಇಲಾಖೆಯ ಎಲ್ಲ ಡಾಕ್ಟರ್‍ಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿದ್ದರು.