ಆ.27: ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನೆ, ಇಸ್ರೇಲ್ ಅಧ್ಯಯನ ಪ್ರವಾಸ- ಸಂವಾದ

Spread the love

ಆ.27: ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನೆ, ಇಸ್ರೇಲ್ ಅಧ್ಯಯನ ಪ್ರವಾಸ-ಸಂವಾದ

ಮಂಗಳೂರು: ಇಸ್ರೇಲ್ಗೆ ಪ್ರಥಮ ಬಾರಿಗೆ ಅಧ್ಯಯನ ಪ್ರವಾಸ ಕೈಗೊಂಡ ಕೃಷಿ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಎನ್.ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನೆ ಸಮರ್ಪಣೆ ಆ.27 ರಂದು ಬೆಳಿಗ್ಗೆ 11 ಗಂಟೆಗೆ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಿ.ವೇದವ್ಯಾಸ ಕಾಮತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರಾಥಮಿಕ ಸಹಕಾರಿ ಸಂಘಗಳನ್ನು ಕ್ರಿಯಾಶೀಲರನ್ನಾಗಿಸುವ ಉದ್ದೇಶದಿಂದ ಸಂಘಗಳ ಪದಾಧಿಕಾರಿಗಳನ್ನು ಇಸ್ರೇಲ್ ಅಧ್ಯಯನ ಪ್ರವಾಸಕ್ಕೆ ಕಳುಹಿಸಿ ಚಾರಿತ್ರಿಕವಾದ ದಾಖಲೆ ಮಾಡಿದೆ. ಇದು ರಾಜೇಂದ್ರಕುಮಾರ್ ಅವರ ನಾಯಕತ್ವದಿಂದ ಸಾಧ್ಯವಾಗಿದ್ದು, ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಇಸ್ರೇಲ್ನ ಕನಿಷ್ಠ ನೀರು ಬಳಕೆ ಕೃಷಿ ಪದ್ಧತಿ, ಹನಿ ನೀರಾವರಿ, ರಾಷ್ಟ್ರದ ಕೃಷಿ ರಂಗದ ಅಧ್ಯಯನದೊಂದಿಗೆ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡು ದೇಶದ ಅಭಿವೃದ್ಧಿ ಹೊಂದಿದ ಸುಧಾರಿತ ಕೃಷಿ ಅನುಸರಿಸುವುದು ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್, ಸದಾಶಿವ ಉಳ್ಳಾಲ್, ಶಶಿಕುಮಾರ್ ರೈ ಬಿ., ಸಿಇಒ ರವೀಂದ್ರ ಬಿ., ಮಹಾಪ್ರಬಂಧಕ ಗೋಪಿನಾಥ ಭಟ್, ಬಂಟ್ವಾಳ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಬಂಟ್ವಾಳ ತಾಲ್ಲೂಕು ವರ್ತಕರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಭಾಶ್ಚಂದ್ರ ಇದ್ದರು.


Spread the love