ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸ್ಟಾರ್ಟ್‍ಅಪ್ – ಉದ್ಯಮದ ಜೊತೆಗೆ ಸಾಮಾಜಿಕ ಕಾಳಜಿ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂರ್ಟಪ್ರನಶಿಪ್ ಡೆವಲೆಪ್ ಮೆಂಟ್ ಸೆಲ್‍ನ ವತಿಯಿಂದ ಸ್ಟೂಡೆಂಟ್ ಸ್ಟಾಟ್-ಅಪ್ ನಲ್ಲಿ `ಹೋಮ್ಜಾ’ ಎನ್ನುವ ಕಂಪೆನಿಯೊಂದನ್ನು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸ್ಥಾಪಿಸಿ ಯುವ ಉದ್ಯಮಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಉದ್ಯಮ, ಉದ್ಯೋಗ ಸೃಷ್ಟಿಯ ಜೊತೆಗೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಕಂಪೆನಿಯನ್ನು ಮೂಡುಬಿದಿರೆಯಲ್ಲಿ ಸ್ಥಾಪಿಸಿದ್ದಾರೆ.
ಯುವರ್ ಪರ್ಪೆಕ್ಟ್ ಹೋಮ್ ಮೇಕರ್ ಅಡಿಬರಹದೊಂದಿಗೆ `ಹೋಮ್ಜಾ’ ಕಂಪೆನಿಯನ್ನು ವಿದ್ಯಾರ್ಥಿ ಸ್ರಜನ್‍ದಾಸ್ ಸ್ಥಾಪಿಸಿದ್ದು, ಮಂಗಳವಾರ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಯ ಸ್ಟಾರ್ಟ್‍ಅಪ್ ಕಂಪೆನಿಯನ್ನು ಲೋಕಾರ್ಪಣೆಗೊಳಿಸಿ, ಹೋಮ್ಜಾದ ವೆಬ್ ಸೈಟ್ ಅನ್ನು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೆ ಛಲ ಮತ್ತು ಬದ್ಧತೆ ಇದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಯಾವಾಗ ನಾವು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತೇವೋ, ಅದಕ್ಕೆ ಪೂರಕವಾಗಿ ಪರಿಶ್ರಮ ಪಡುತ್ತೇವೋ ಆಗ ಬೆಳೆಯಲು ಸಾಧ್ಯವಾಗುತ್ತದೆ. ಕಷ್ಟ ಬಂದಾಗ ನಾವು ಕುಗ್ಗದೆ ಅದನ್ನು ಅದನ್ನು ಸಮರ್ಥವಾಗಿ ಎದುರಿಸಿದರೆ ಯಶಸ್ಸು ಸಿಗುತ್ತದೆ.. ಜಾಗತಿಕ ಮಟ್ಟದಲ್ಲಿ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಬೆಳೆದ ರೀತಿಯಲ್ಲಿ ನಮ್ಮೂರಿನಿಂದಲೇ ಪ್ರಾರಂಭಗೊಂಡ ಹೋಮ್ಜಾ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಮಾತಾನಾಡುತ್ತಾ, ಕನಸು ನನಸಾಗಬೇಕಾದರೆ ಪರಿಶ್ರಮ ಅಗತ್ಯ, ಜೀವನದಲ್ಲಿ ಬರುವ ಪ್ರತಿಯೋಂದು ಅಡೆ ತಡೆಗಳನ್ನು ಮೆಟ್ಟಿ ನಿಂತಾಗ ಯಶಸ್ಸು ಗಳಿಸಬಹುದೆಂದರು.
ಫಾಧರ್ ಜೋಸ್, ಆಳ್ವಾಸ್ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಜೋಬಿನ್ ಮತ್ತು ಸ್ರಜನ್‍ದಾಸ್‍ನ ಹೆತ್ತವರು ಮತ್ತು ಸಂಬಂದಿಕರು ಉಪಸ್ಥಿತರಿದ್ದರು.
ಏನಿದು ಹೋಮ್ಜಾ:?
ಪ್ರಾರಂಭಿಕ ಹಂತದಲ್ಲಿ ಹೋಮ್ಜಾ ಮೂಡುಬಿದಿರೆ ಮತ್ತು ಮಿಜಾರು ವ್ಯಾಪ್ತಿಯ ಗ್ರಾಹಕರು ಆಹಾರ ಹಾಗೂ ಆಹಾರ ಸಾಮಾಗ್ರಿ, ದಿನಬಳಕೆ ಸೊತ್ತುಗಳನ್ನು ಬಯಸಿದಲ್ಲಿ ಅವರಿರುವ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ. ಮುಂಜಾನೆ 6 ರಿಂದ ರಾತ್ರಿ 9 ಗಂಟೆಯ ತನಕ ಡೆಲಿವರಿ ಲಭ್ಯ ಇದೆ. ನಿಮಗೆ ಬೇಕಾದಂತಹ ಆಹಾರ ಪದಾರ್ಥ, ದಿನಸಿ ಸಾಮಾನು, ಸ್ಟೇಷನರಿ, ಕಾಸ್ಮೆಟಿಕ್, ಬೇಕರಿ ಮತ್ತು ಹಣ್ಣು- ಹಂಪಲು ಇತ್ಯಾದಿ ದೊರೆಯುತ್ತದೆ. ಯಾವ ಗ್ರಾಹಕನು 1000 ಕ್ಕಿಂತ ಹೆಚ್ಚು ಮೌಲ್ಯದ ವಸ್ತುವನ್ನು ಖರೀಸಿದಲ್ಲಿ ಅದರಲ್ಲಿ ಒಂದು ಪಾಲು ಹಣವನ್ನು ಶಾಲಾ ವಂಚಿತ ಬಾಲಕರಿಗೆ ಮತ್ತು ಬಡ ವಿಧ್ಯಾರ್ಥಿಗಳ ಕಲ್ಯಾಣಕ್ಕೆ ವಿನಿಯೋಗಿಸಲಾಗುತ್ತದೆ.
ಸ್ರಜನ್‍ದಾಸ್:
ಸ್ರಜನ್‍ದಾಸ್ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇವರ್ಷದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿ. ಇವರು ಮೂಲತಃ ಕುಂದಾಪುರ ಜಡ್ಕಲ್ ನಿವಾಸಿ. ಇವರು ಕೃಷಿಕ ದೇವದಾಸ್ ವಿ.ಜೆ ಮತ್ತು ಶೆರ್ಲಿ ದಂಪತಿಯ 2ನೇ ಪುತ್ರ.