ಇಂದು (ಮಾ.23) ಉಡುಪಿಯಲ್ಲಿ ’ಗಾಂಧಿ ಭಾರತ’ ಸಮಾವೇಶ
ಉಡುಪಿ: ವಿವಿಧ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ನ ಸಹಯೋಗದೊಂದಿಗೆ ‘ಜೈ ಬಾಪು ಜೈ ಭೀಮ್ ಜೈ ಸಂವಿಧಾನ’ ಅಭಿಯಾನದ ಪ್ರಯುಕ್ತ ‘ಗಾಂಧಿ ಭಾರತ’ ಸಮಾವೇಶವನ್ನು ಉಡುಪಿ ಮಿಷನ್ ಕಂಪೌಂಡ್ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಾ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಉಡುಪಿ ಕೆ.ಎಂ.ಮಾರ್ಗದಲ್ಲಿರುವ ನಿತ್ಯಾನಂದ ಮಂದಿರದಿಂದ ಮಧ್ಯಾಹ್ನ 3:30 ಗಂಟೆಗೆ ಮೆರವಣಿಗೆ ಹೊರಡಲಿದೆ. ಸಂಜೆ 4 ಗಂಟೆಗೆ ನಡೆಯುವ ಸಭಾಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿರುವರು. ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ದಿಕ್ಕೂಚಿ ಭಾಷಣ ಮಾಡಲಿರುವರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿರುವರು ಎಂದರು.
ಐದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಸಮಾವೇಶವು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ನಡೆಯಲಿದೆ. ಸಂವಿಧಾನ ಹಾಗೂ ಅಂಬೇಡ್ಕರ್ ಕುರಿತು ನಡೆಯುತ್ತಿರುವ ಚರ್ಚೆಗಳು ಗಂಭೀರ ಸ್ವರೂಪದವುಗಳಾಗಿದ್ದು, ಯಾವುದೇ ಸಂದರ್ಭದಲ್ಲೂ ಸಂವಿಧಾ ನವು ಪ್ರತಿಪಾದಿಸಿದ ಶ್ರೇಷ್ಠ ಮೌಲ್ಯಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮುಂದಿದೆ. ದೇಶಕ್ಕಾಗಿ ಗಾಂಧೀಜಿ ನೀಡಿದ ಕೊಡುಗೆಗಳು ಬಹಳಷ್ಟಿವೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ಗಾಂಧಿ ವಿಚಾರಧಾರೆಯು ವ್ಯಾಪಕ ಟೀಕೆಗೆ ಗುರಿಯಾಗುತ್ತಿರುವುದು ಆತಂಕದ ವಿಚಾರ. ಸಂವಿಧಾನ ಹಾಗೂ ಅಂಬೇಡ್ಕರ್ ಕುರಿತು ನಡೆಯುತ್ತಿರುವ ಚರ್ಚೆಗಳು ಗಂಭೀರ ಸ್ವರೂಪ ದವುಗಳಾಗಿದ್ದು ಯಾವುದೇ ಸಂದರ್ಭದಲ್ಲಿಯೂ ಸಂವಿಧಾನವು ಪ್ರತಿಪಾದಿಸಿದ ಶ್ರೇಷ್ಠ ಮೌಲ್ಯಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮುಂದಿದೆ. ಗಾಂಧೀಜಿ ಅಂಬೇಡ್ಕರವರ ಆಶಯ ಗಳನ್ನು ಗೌರವಿಸುತ್ತಾ, ಅವರ ಆಶಯದಂತೆ ದೇಶವನ್ನು ಮುನ್ನಡೆಯಬೇಕು ಎಂದು ಅವರು ತಿಳಿಸಿದರು.