ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ ಯತ್ನ-ಆರೋಪಿ ಬಂಧನ
ಉಡುಪಿ: ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಹಾರ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ್ ರಾಜ್ಯದ ಕಟೋರಿಯಾ ಜಿಲ್ಲೆಯ ಭುಲುವಾಪುರ ನಿವಾಸಿ ಪ್ರಮೋದ್ ಕುಮಾರ್ ಯಾದವ್ (26) ಬಂಧಿತ ಆರೋಪಿಯಾಗಿದ್ದು ಈತನಿಂದ 2 ಕಿಲೋ, 122 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದ್ದು ಅದರ ಅಂದಾಜು ಮೌಲ್ಯ 42,000 ರೂ. ಆಗಿದೆ.
ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರ್ಗಿ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ CEN ಅಪರಾಧ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಅವರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ (ಡಿ.ಸಿ.ಬಿ.) ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ರವರ ಜೊತೆಗೆ ಪೊಲೀಸ್ ಉಪನಿರೀಕ್ಷಕ ಸಿ.ಹೆಚ್. ರಾಮಚಂದ್ರ ಭಟ್ ,ಸಹಾಯಕ ಪೊಲೀಸ್ ಉಪನಿರೀಕ್ಷಕ ಕೇಶವ ಗೌಡ, ಮತ್ತು ಸಿಬ್ಬಂದಿಯವರಾದ ಸತೀಶ್, ಕೃಷ್ಣಪ್ರಸಾದ್, ಪ್ರಸನ್ನ ಸಾಲ್ಯಾನ್, ನಾಗೇಶ್, ಸಂಜಯ್ ಶೆಟ್ಟಿ ಇದ್ದರು.