ಜು 1 ರಿಂದ ಉಡುಪಿ ಟಿಎಮ್ ಎ ಪೈ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ
ಉಡುಪಿ: ಈ ವರೆಗೆ ಉಡುಪಿಯಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದ ಟಿ ಎಮ್ ಎ ಪೈ ಆಸ್ಪತ್ರೆ ಜುಲೈ 1 ರಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆಯನ್ನು ನೀಡಲು ಆರಂಭಿಸಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲವು, ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯನ್ನು 2020ರ ಏಪ್ರಿಲ್ 1ರಿಂದ ಕೋವಿಡ್-19 ಚಿಕಿತ್ಸೆಗೆ ಮೀಸಲಿರಿಸಿದೆ. ಈ ಆಸ್ಪತ್ರೆಯನ್ನು ಉನ್ನತ ದರ್ಜೆಗೇರಿಸಿ ಉಡುಪಿ ಜಿಲ್ಲೆಯ ಕೋವಿಡ್-19 ರೋಗಿಗಳಿಗೆ ಉತ್ತಮವಾದ ತೀವ್ರ ನಿಘಾ ಘಟಕದ ಸವಲತ್ತು ಮತ್ತು ಆಮ್ಲಜನಕದ ಸಹಾಯವುಳ್ಳ ಹಾಸಿಗೆಗಳಿಗೆ ಹೆಚ್ಚಿನ ಗಮನವನ್ನು ನೀಡಲಾಗಿದೆ. ಈ ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ವಿಶಿಷ್ಟ ಮಾದರಿಯಾಗಿ ಇಲ್ಲಿಯವರೆಗೆ ಬಹಳ ಯಶಸ್ವಿಯಾಗಿದೆ ಮತ್ತು ಅನೇಕ ಭಾಗಗಳಿಂದ ಜನಮನ್ನಣೆಯನ್ನು ಪಡೆದಿದೆ.
ಜೂನ್ 30ರವರೆಗೆ ಡಾ. ಟಿ ಎಂ ಎ ಪೈ ಆಸ್ಪತ್ರೆಯ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ 202 ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿ, 147 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದೆ. 01 ಏಪ್ರಿಲ್ 2020ರಿಂದ 30 ಜೂನ್ 2020ರವರೆಗೆ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ ಆಸ್ಪತ್ರೆಯು ಜನರಲ್ ವಾರ್ಡಿನಲ್ಲಿ, ಅವಶ್ಯವಿರುವ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ, ವೆಂಟಿಲೇಟರ್, ರಕ್ಷಕ ಸಾಧನಗಳು ಮತ್ತು ಡಯಾಲಿಸಿಸ್ ಸೌಲಭ್ಯಗಳ ಸಹಿತ ಸಂಪೂರ್ಣ ಉಚಿತವಾದ ಚಿಕಿತ್ಸೆಯನ್ನು ನೀಡಿದೆ. ಮಾಹೆ ಮಣಿಪಾಲವು 75 ಲಕ್ಷ ರೂಪಾಯಿಗಳನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದು ಭರಿಸಿದೆ. ಅದರಲ್ಲಿ ಸುಮಾರು 15 ಲಕ್ಷ, ಪೌಷ್ಟಿಕ ಆಹಾರಕ್ಕೆ ವ್ಯಯಿಸಲಾಗಿದೆ. ಇದಲ್ಲದೇ ಆಸ್ಪತ್ರೆಯು ಸುಮಾರು 50 ಲಕ್ಷ ರೂಪಾಯಿಯನ್ನು ಆಸ್ಪತ್ರೆಯ ಸೇವಾ ಸೌಲಭ್ಯಗಳ ಮೇಲ್ದರ್ಜೀಕರಣಕ್ಕೆ ಮತ್ತು ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಸೂಕ್ತವಾಗಿ ಅನ್ವಯವಾಗುವಂತೆ ಮಾಡಲು ಖರ್ಚು ಮಾಡಿದೆ.
01 ಜುಲೈ 2020 ರಿಂದ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗೆ ಜನರಲ್ ವಾರ್ಡಿನಲ್ಲಿ ಲಭ್ಯವಿದೆ. ಈ ವ್ಯವಸ್ಥೆಯನ್ನು ಘನ ಕರ್ನಾಟಕ ರಾಜ್ಯ ಸರಕಾರದ ಆದೇಶ ದಿನಾಂಕ 23 ಜೂನ್ 2020ರ ಎಚ್ ಎಫ್ ಡಬ್ಲ್ಯೂ 22 ಎ ಸಿ ಎಸ್ 2020ರಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಕಾರ್ಯಗತ ಮಾಡಲಾಗಿದೆ. ರೋಗಿಗಳಿಗೆ ಸ್ಪೆಶಲ್ ವಾರ್ಡ್ ಬೇಕಾದಲ್ಲಿ ಈ ಯೋಜನೆಯ ಲಭ್ಯವಾಗದಿದ್ದರೂ ಸಹಾ ಮೇಲಿನ ಕರ್ನಾಟಕ ರಾಜ್ಯ ಸರಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮೊತ್ತವನ್ನು ಮಾತ್ರ ಅವರು ಪಾವತಿಸಬೇಕಾಗುತ್ತದೆ.
ಡಾ ಟಿ ಎಂ ಎ ಪೈ ಆಸ್ಪತ್ರೆ ಉಡುಪಿಯು, ಕೋವಿಡ್-19 ರೋಗಿಗಳಿಗೆ ಈ ರೀತಿಯಲ್ಲಿ ಚಿಕಿತ್ಸೆ ಕೊಡುವ ಕಾರ್ಯವನ್ನು ಬೇರೆ ಆಸ್ಪತ್ರೆ ಅಥವಾ ಯಾವುದೇ ಖಾಸಗಿ ಆಸ್ಪತ್ರೆ ಉಡುಪಿಯಲ್ಲಿ ತಯಾರಾಗುವವರೆಗೂ ಮುಂದುವರೆಸಲಿದೆ ಎಂದು ಅವರು ತಿಳಿಸಿದ್ದಾರೆ.