ಇವಿಎಂ, ವಿವಿ ಪ್ಯಾಟ್ ಬಗ್ಗೆ ಯುವ ಮತದಾರರಿಗೆ ಅರಿವು ಮೂಡಿಸಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ 

Spread the love

ಇವಿಎಂ, ವಿವಿ ಪ್ಯಾಟ್ ಬಗ್ಗೆ ಯುವ ಮತದಾರರಿಗೆ ಅರಿವು ಮೂಡಿಸಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ 

ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಯುವ ಮತದಾರರು ಮತ್ತು ಹೊಸ ಮತದಾರರಿಗೆ ಇವಿಎಂ ಬಳಕೆ ಮತ್ತು ವಿವಿ ಪ್ಯಾಟ್ನ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಶುಕ್ರವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕಾಪು ಮತ್ತು ಉಡುಪಿ ವಿಧಾನಸಭಾ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು, ಪಿಡಿಓಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಬಿಎಲ್ಓಗಳಿಗೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಇವಿಎಂ ಮತ್ತು ವಿವಿಪ್ಯಾಟ್ ಬಳಕೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆ ವೇಳೆಯಲ್ಲಿ ಮತದಾನ ಮಾಡಿರುವವರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಅರಿವು ಇದೆ, ಆದರೆ ಜಿಲ್ಲೆಯಲ್ಲಿ ಹೊಸದಾಗಿ ನೊಂದಣಿಯಾದ ಮತದಾರರರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು, ಜಿಲ್ಲೆಯ ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿನ ಪ್ರತಿಯೊಬ್ಬರಿಗೂ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಬೆಕು, ಈ ಬಗ್ಗೆ ಈಗಿನಿಂದಲೇ ವೇಳಾಪಟ್ಟಿ ಸಿದ್ದಮಾಡಿಕೊಂಡು ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ, ಭೇಟಿ ನೀಡಿದ ಎಲ್ಲಾ ಗ್ರಾಮದಲ್ಲೂ ಸಹಿ ಸಂಗ್ರಹ ಅಭಿಯಾನ ನಡೆಸಿ ಮತ್ತು ಬಿತ್ತಿಪತ್ರಗಳ ಮೂಲಕ ಅರಿವು ಮೂಡಿಸಿ, ಮತದಾನ ಪ್ರಮಾಣ ಕಡಿಮೆಯಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ, ಕಾರಣ ತಿಳಿದು, ಮತದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ ಎಂದು ಹೆಫ್ಸಿಬಾ ರಾಣಿ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು, ಚುನಾವಣಾ ಕಾರ್ಯದಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಮಾತನಾಡಿ, ಇವಿಎಂ ಮತ್ತು ವಿವಿಪ್ಯಾಟ್ ಮೂಲಕ ಮತದಾನ ಮಾಡುವುದರ ಮೂಲಕ ಪ್ರತಿಯೊಬ್ಬರ ಅಮೂಲ್ಯ ಮತ ಅವರ ಆಯ್ಕೆಯ ಅಭ್ಯರ್ಥಿಗೆ ತಲುಪುವ ಬಗ್ಗೆ ಸಂಪೂರ್ಣ ಖಾತರಿ ಅಗಿದೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಪ್ತಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲು ವೇಳಾಪಟ್ಟಿ ಸಿದ್ದಪಡಿಸಲಾಗುತ್ತಿದ್ದು, ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಿ, ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗಿರುವ ಕಡೆಗಳಲ್ಲಿ ಕಾರಣ ತಿಳಿದು ಮತದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು, ವಿಕಲಚೇತನರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬರನ್ನೂ ಒಳಗೊಂಡ ಸುಗಮ ಚುನಾವಣೆಗೆ ಎಲ್ಲಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್. ಪ್ರಕಾಶ್, ಇವಿಎಂ ಮತ್ತು ವಿವಿಪ್ಯಾಟ್ ಬಳಕೆ, ಕಾರ್ಯ ನಿರ್ವಹಣೆ ಕುರಿತು ತರಬೇತಿ, ಇವಿಎಂ ಮತ ಯಂತ್ರಕ್ಕೆ ಇಂಟರ್ನೆಟ್ನ ಸಂಪರ್ಕ ಸಾಧ್ಯವಿಲ್ಲ. ಚಿಪ್ ಮೂಲಕ ಸಹ ಕನೆಕ್ಟ್ ಆಗುವುದಿಲ್ಲ. ವಿದ್ಯುತ್ ಸಂಪರ್ಕ ಇಲ್ಲವಾದರೂ ಕಾರ್ಯ ನಿರ್ವಹಿಸಲಿದೆ, ಹಾಗಾಗಿ ಈ ಯಂತ್ರದಲ್ಲಿ ದಾಖಲಾದ ಮೂಲಕ ಮತಗಳು ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.

ಇವಿಎಂ ನಲ್ಲಿರುವ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿಎಸ್ಡಿಯು, ಮತ್ತು ವಿವಿಪ್ಯಾಟ್ ಕುರಿತ ಮಾಹಿತಿ ಮತ್ತು ಅವುಗಳ ಕಾರ್ಯ ವೈಖರಿಯನ್ನು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ ಉಪಸ್ಥಿತರಿದ್ದರು.


Spread the love