ಇಸ್ರೇಲ್ – ಪೆಲೆಸ್ತಿನ್ ಸಂಘರ್ಷ ಉಲ್ಬಣ – ಶಾಂತಿ ಸ್ಥಾಪನೆಗೆ ಪ್ರಾರ್ಥಿಸಲು ಉಡುಪಿ ಬಿಷಪ್ ಕರೆ
ಉಡುಪಿ: ಇಸ್ರೇಲ್- ಪೆಲೆಸ್ತಿನ್ ಸಂಘರ್ಷ ಉಲ್ಬಣದ ಬಗ್ಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ. ಡಾ. ಜೆರಾಲ್ಡ್ ಲೋಬೋರವರು ಕಳವಳ ವ್ಯಕ್ತ ಪಡಿಸಿದ್ದು ಶೀಘ್ರ ಕದನ ವಿರಾಮ ಏರ್ಪಟ್ಟು ಯುದ್ಧದ ನಿಲುಗಡೆ ಮತ್ತು ಶಾಂತಿಯ ಮರು ಸ್ಥಾಪನೆಯಾಗಲಿ ಎ೦ದು ಅವರು ಹಾರೈಸಿದ್ದಾರೆ.
ಉಡುಪಿ ಜಿಲ್ಲೆಯ ಸುಮಾರು 5 ಸಾವಿರ ಮಂದಿ ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದು ಅವರು ಮತ್ತು ಅವರ ಕುಟುಂಬದ ಸದಸ್ಯರು ಭಯಭೀತರಾಗಿದ್ದಾರೆ. ಅವರ ಸುರಕ್ಷತೆಗಾಗಿ ಮತ್ತು ಶಾಂತಿ ಸ್ಥಾಪನೆಗಾಗಿ ಎಲ್ಲರೂ ಪ್ರಾರ್ಥನೆ ಮಾಡೋಣ ಎ೦ದು ಪೂಜ್ಯ ಬಿಷಪರು ವಿನಂತಿ ಮಾಡಿದ್ದಾರೆ.
ಇಸ್ರೇಲ್ ದೇಶದ ಈಗಿನ ಪರಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ಗೆ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ಉಡುಪಿ ಜಿಲ್ಲೆಯವರು ತಮ್ಮ ಮಾಹಿತಿಯನ್ನು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಪೂಜ್ಯ ಬಿಷಪರು ವಿನಂತಿಸಿದ್ದಾರೆ.