ಈಗಿನ ಸರಕಾರಗಳು ವಾಟ್ಸಾಪ್ ಮೂಲಕ ಆಡಳಿತ ನಡೆಸುತ್ತಿದೆ – ಕಾರ್ಟೂನಿಸ್ಟ್ ಪಂಜು ಗಂಗೊಳ್ಳಿ
ಉಡುಪಿ: ಯಾವುದೇ ಸರಕಾರ ನಿಜ ಹೇಳುವುದಿಲ್ಲ. ಈಗಿನ ಸರಕಾರಗಳಂತೂ ಸುಳ್ಳು ಹೇಳುವುದು ಮಾತ್ರವಲ್ಲ ವಾಟ್ಸಾಪ್ ಮೂಲಕ ಆಡಳಿತ ನಡೆಸುತ್ತಿದೆ. ಪತ್ರಿಕಾ ರಂಗ ಆ ಸುಳ್ಳಿನ ಹಿಂದೆ ಹೋಗಿ ಸತ್ಯವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಆದರೆ ಇಂದು ಆ ಪರಿಸ್ಥಿತಿ ಬದಲಾಗಿದೆ. ಸರಕಾರದ ಪರವಾಗಿ ಸುಳ್ಳುಗಳನ್ನು ಹರಡುವ ಕಾರ್ಯ ನಡೆಯುತ್ತಿದೆ ಎಂದು ಕಾರ್ಟೂನಿಸ್ಟ್ ಹಾಗೂ ಬಹರಗಾರ ಪಂಜು ಗಂಗೊಳ್ಳಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾದ ಸಂಘದ ಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪತ್ರಿಕಾ ರಂಗ ಇಂದು ಬಹಳಷ್ಟು ದುರ್ಬಲ ಸ್ಥಿತಿಯಲ್ಲಿದೆ. ಕೊಲೆ, ಅತ್ಯಾಚಾರ, ಶೋಷಣೆಯ ಸಂತ್ರಸ್ತರ ಪರ ನಿಲ್ಲುವ ಬದಲು ಶೋಷಣೆ ಮಾಡುವವರೊಂದಿಗೆ ನಿಲ್ಲುತ್ತಿದೆ. ಇದು ವೀಕ್ಷಕರು ಹಾಗೂ ಓದುಗರಿಗೆ ಮಾಡುವ ದ್ರೋಹ ಎಂದು ಅವರು ತಿಳಿಸಿದರು.ಹಿಂದೆ ಪ್ರತಕರ್ತರಿಗೆ ಸಮಾಜದಲ್ಲಿ ಗೌರವ ಸ್ಥಾನ ಇತ್ತು. ಜನ ಅವರ ಮಾತುಗಳನ್ನು ಗಂಭೀರವಾಗಿ ಕೇಳುತ್ತಿದ್ದರು ಮತ್ತು ಅದನ್ನು ಸತ್ಯ ಎಂಬುದಾಗಿ ನಂಬುತ್ತಿದ್ದರು. ಆದರೆ ಈಗ ನಾನೊಬ್ಬ ಪತ್ರಕರ್ತ ಹೇಳಿಕೊಂಡರೆ ಯಾವ ಪಕ್ಷದವರು ಕೇಳುವ ಸ್ಥಿತಿಯಲ್ಲಿ ನಾವು ಇದ್ದೇವೆ. ಆ ಮೂಲಕ ನಾವು ನೈತಿಕವಾಗಿ ದುರ್ಬಲವಾಗಿದ್ದೇವೆ ಎಂಬುದಕ್ಕೆ ಇದು ಸೂಚನೆಯಾಗಿದೆ ಎಂದರು.
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಏನು ಮಾಡುತ್ತದೆ ಮತ್ತು ಏನು ಮಾಡುತ್ತಿಲ್ಲ ಎಂದು ತಿಳಿಸುವ ಕಾರ್ಯವನ್ನು ಪತ್ರಿಕಾ ರಂಗ ಮಾಡಬೇಕು. ಹಾಗಾಗಿ ಪತ್ರಿಕಾ ರಂಗವನ್ನು ಜನ ಕಾವಲು ನಾಯಿ ಎಂಬುದಾಗಿ ತಿಳಿದುಕೊಂಡಿದ್ದಾರೆ. ಆದರೆ ಈಗ ಕೆಲವು ಮಾಧ್ಯಮ ನಿರ್ದಿಷ್ಟ ಪಕ್ಷದ ಪರವಾಗಿ ನಿಂತು ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.
ಮಾಧ್ಯಮ ಸರಕಾರವನ್ನು ಪ್ರಶ್ನಿಸುವ ಬದಲು ವಿರೋಧ ಪಕ್ಷಗಳನ್ನು ಪ್ರಶ್ನಿಸುತ್ತಿದೆ. ಮಾಧ್ಯಮ ಸರಕಾರದ ವಿರೋಧ ಪಕ್ಷ ಆಗುವ ಬದಲು ವಿರೋಧ ಪಕ್ಷಗಳ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಈ ಕುರಿತು ಇಂದು ನಾವು ನಮ್ಮನ್ನೇ ಪ್ರಶ್ನಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಹಿರಿಯ ಪತ್ರಕರ್ತ ಮೋಹನ್ಚಂದ್ರ ನಂಬಿಯಾರ್ ಸಂಘದ ಸ್ಥಾಪನೆ, ಅಧ್ಯಕ್ಷರುಗಳ ಕೊಡುಗೆ ಕುರಿತು ಮಾತನಾಡಿದರು. ಸ್ಥಾಪನಾ ದಿನದ ಗೌರವ ಸನ್ಮಾನವನ್ನು ಸಂಘದ ಸ್ಥಾಪಕ ಸದಸ್ಯ, ಹಿರಿಯ ಪತ್ರಕರ್ತ ಡಾ.ಸುಧಾಕರ್ ನಂಬಿಯಾರ್ ಅವರಿಗೆ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಸಂಘದ ಸದಸ್ಯ ಆಸ್ಟ್ರೋ ಮೋಹನ್ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಅಸ್ಟ್ರೋ ಮೋಹನ್ ತಮ್ಮ ಪುಸ್ತಕಗಳನ್ನು ಸಂಘದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಅತಿಥಿಗಳ ಪರಿಚಯ ಮಾಡಿದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಶರೀಫ್ ಕಾರ್ಕಳ ವಂದಿಸಿದರು. ಪತ್ರಕರ್ತ ಮೈಕಲ್ ರೋಡಿಗ್ರಸ್ ಕಾರ್ಯಕ್ರಮ ನಿರೂಪಿಸಿದರು