ಈಡಿ ದಾಳಿಯಿಂದ ರಾಜ್ಯ ಸರಕಾರದ ನಿಜ ಬಣ್ಣ ಬಯಲು: ಸಂಸದ ಕ್ಯಾ. ಬ್ರಿಜೇಶ್ ಚೌಟ

Spread the love

ಈಡಿ ದಾಳಿಯಿಂದ ರಾಜ್ಯ ಸರಕಾರದ ನಿಜ ಬಣ್ಣ ಬಯಲು: ಸಂಸದ ಕ್ಯಾ. ಬ್ರಿಜೇಶ್ ಚೌಟ
 

ಮಂಗಳೂರು: ಮೈಸೂರಿನ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ಈಡಿ) ನಡೆಸಿರುವ ದಾಳಿಯಿಂದ ಕಾಂಗ್ರೆಸ್ ನೇತೃತ್ವದ ರಾಜ್ಯದ ಭ್ರಷ್ಟ ಸರ್ಕಾರದ ನಿಜ ಬಣ್ಣ ಬಯಲಾಗಿದ್ದು, ಈ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಸರಕಾರವನ್ನು ಕಟಕಟೆಗೆ ತಂದು ನಿಲ್ಲಿಸುವ ಕಾಲ ಹತ್ತಿರವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಹಲವೆಡೆ ಈಡಿ ನಡೆಸಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ಈ ಮುಡಾ ನಿವೇಶನ ಹಂಚಿಕೆ ಭೂಹಗರಣ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ರಾಜ್ಯ ಸರಕಾರದ ಅಧೀನದಲ್ಲಿರುವ ಯಾವುದೇ ತನಿಖಾ ಸಂಸ್ಥೆಯು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಆ ಮೂಲಕ ತನ್ನ ಉತ್ತರದಾಯಿತ್ವವನ್ನು ಮರೆಮಾಚಿ ರಾಜ್ಯದ ಜನತೆಯನ್ನು ಹೇಗೆ ದಾರಿ ತಪ್ಪಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಈ ಪ್ರಕರಣದಲ್ಲಿ ಈ.ಡಿ. ಎಂಟ್ರಿಯಾಗಿರುವ ಕಾರಣ ಸತ್ಯಾಂಶ ಶೀಘ್ರ ಹೊರಬರಲಿದೆ ಎಂದು ಹೇಳಿದ್ದಾರೆ.

ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ, ಎಫ್‌ಐಆರ್ ದಾಖಲಾದ ಬಳಿಕ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಬೇಕಾಗಿದ್ದ ಸಿಎಂ ಸಿದ್ದರಾಮಯ್ಯನವರು ಕುರ್ಚಿ ಉಳಿಸಿಕೊಳ್ಳಲು ಇಷ್ಟು ದಿನ ತಮ್ಮ ವಿರುದ್ಧದ ಎಲ್ಲ ಗಂಭೀರ ಆರೋಪಗಳಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಮದು ಚೌಟ ಆರೋಪಿಸಿದ್ದಾರೆ.

ಕಾಂಗ್ರೆಸ್ ಪ್ರತಿ ಸಲ ಯಾವುದೇ ತನಿಖೆ ಅಥವಾ ದಾಳಿ ನಡೆದಾಗ ಅದನ್ನು ರಾಜಕೀಯ ಪ್ರೇರಿತ ಎಂಬುದಾಗಿ ಹೇಳಿ ಸತ್ಯ ಮರೆಮಾಚುವುದು ಒಂದು ಚಾಳಿಯಾಗಿದೆ. ಎಲ್ಲ ಹಗರಣಗಳಲ್ಲಿಯೂ ಕಾಂಗ್ರೆಸ್ ಪಕ್ಷವು ಇದೇ ರೀತಿಯ ತಂತ್ರಗಾರಿಕೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.

ಮುಡಾದಲ್ಲಿ ನಡೆದಿರುವ ಬರೋಬ್ಬರಿ 5000 ಕೋಟಿ ರೂ. ಅವ್ಯವಹಾರ ಸಣ್ಣ ವಿಚಾರವಲ್ಲ. ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಉಚಿತ ಗ್ಯಾರಂಟಿ ಕೊಡುಗೆಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದ್ದು, ಇದನ್ನು ವಸೂಲಿ ಮಾಡಿದರೆ ರಾಜ್ಯದ ಪಾಲಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಬಹುದು. ಕರ್ನಾಟಕವನ್ನು ಲೂಟಿ ಮಾಡಿರುವ ತಪ್ಪಿತಸ್ಥರನ್ನು ಕಟಕಟೆಗೆ ತಂದು ನಿಲ್ಲಿಸುವವರೆಗೆ ಬಿಜೆಪಿ ಹೋರಾಟ ನಿಲ್ಲುವುದಿಲ್ಲ ಎಂದು ಸಂಸದರು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments