ಉಚಿತ ಬಸ್ ಪಾಸ್ ನೀಡಲು ಶಾಸಕ ವೇದವ್ಯಾಸ ಕಾಮತ್ ಆಗ್ರಹ

Spread the love

ಉಚಿತ ಬಸ್ ಪಾಸ್ ನೀಡಲು ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಮಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವುದಾಗಿ ಹಿಂದಿನ ಕಾಂಗ್ರೆಸ್ ಸರಕಾರ ತನ್ನ ಕೊನೆಯ ಬಜೆಟಿನಲ್ಲಿ ಹೇಳಿದ್ದನ್ನು ತಕ್ಷಣ ಜಾರಿಗೊಳಿಸಬೇಕಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸರಕಾರವನ್ನು ಆಗ್ರಹಿಸಿದ್ದಾರೆ.
ಬಜೆಟಿನಲ್ಲಿ ಘೋಷಣೆ ಮಾಡಿದ ಬಳಿಕ ಈಗ ಅನುದಾನದ ಕೊರತೆ ಇದೆ ಎಂದು ಸಬೂಬು ನೀಡುವುದು ಸರಿಯಲ್ಲ ಎಂದು ಹೇಳಿರುವ ಶಾಸಕರು ವಿದ್ಯಾರ್ಥಿಗಳಿಂದ ಹಣ ಕಿತ್ತುಕೊಂಡು ಸರಕಾರ ನಡೆಸುವ ಅನಿವಾರ್ಯತೆ ಜೆಡಿಎಸ್-ಕಾಂಗ್ರೆಸ್ ಸರಕಾರಕ್ಕೆ ಬಂದಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಉಚಿತ ಬಸ್ ಪಾಸ್ ನಿಂದ ಸರಕಾರಕ್ಕೆ ಹೊರೆಯಾಗುತ್ತದೆ ಎಂದಾದರೆ ಬಜೆಟಿನಲ್ಲಿ ಘೋಷಣೆ ಮಾಡಿದ್ಯಾಕೆ? ಆಗ ಮಕ್ಕಳ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದವರಿಗೆ ಈಗ ಚುನಾವಣೆ ಮುಗಿದ ನಂತರ ಮಕ್ಕಳ ಭವಿಷ್ಯ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ .

Spread the love