ಉಚಿತ ಸಮವಸ್ತ್ರ ಹಾಗೂ ಶಾಲಾ ಶುಲ್ಕ ವಿತರಣೆ

Spread the love

ಉಚಿತ ಸಮವಸ್ತ್ರ ಹಾಗೂ ಶಾಲಾ ಶುಲ್ಕ ವಿತರಣೆ

ಮಂಗಳೂರು: ದ.ಕ.ಜಿ.ಪಂ. ಸರಕಾರಿ ಪ್ರೌಢಶಾಲೆ ಹೊಯಿಗೆಬಜಾರ್ ಮಂಗಳೂರು ಇಲ್ಲಿ ಎಂಫಸಿಸ್ ಮೋರ್ಗನ್‍ಗೇಟ್ಸ್ ಮಂಗಳೂರು ಇವರ ವತಿಯಿಂದ 2016-17ರ ಶೈಕ್ಷಣಿಕ ಸಾಲಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ 8 ಶಾಲಾ ಶುಲ್ಕವನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.

school-

ಎಂಫಸಿಸ್ ಸಂಸ್ಥೆಯ ಶಾಖಾ ಮುಖ್ಯಸ್ಥರಾದ ಅಶ್ವಿಲ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಅತಿಥಿಗಳಾಗಿ ಸಹಾಯಕ ಪೋಲೀಸ್ ಆಯುಕ್ತರಾದ ಉದಯ್.ಎಮ್.ನಾಯಕ್ ಹಾಗೂ ಸಾರಿಗೆ ಪ್ರಾಧಿಕಾರದ ಉಪನಿರೀಕ್ಷಕರಾದ ಸುರೇಶ್ ಕುಮಾರ್ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಾರಿಗೆ ನಿಯಮಗಳು ಹಾಗೂ ಮುಂಜಾಗ್ರತೆಯ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಕಸ್ತೂರಿ.ಹೆಚ್ .ಅರ್ ಅವರು ಅತಿಥಿಗಳನ್ನು ಸ್ವಾಗತಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಒಂದು ದಿನದ ತಾಂತ್ರಿಕ ವಸ್ತುಪ್ರದರ್ಶನ

ಮಂಗಳೂರು:  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕತೆ ತ್ವರಿತಗತಿಯಲ್ಲಿ ಬದಲಾಗುತ್ತಿದ್ದು, ತಾಂತ್ರಿಕತೆಗೆ ತಕ್ಕಂತೆ  ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿ ಸ್ಪರ್ಧಾತ್ಮಕರಾದಲ್ಲಿ ಅತ್ತ್ಯುನ್ನತ ಉದ್ಯೋಗಗಳನ್ನು ಗಿಟ್ಟಿಸುವುದು ಸುಲಭ ಸಾಧ್ಯ ಎಂದು ಮಂಗಳೂರಿನ ಕದ್ರಿಹಿಲ್ಸ್‍ನಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗಿರಿಧರ್ ಸಾಲಿಯಾನ್ ತಿಳಿಸಿದರು.

ಅವರು ವಿಶ್ವ ಯುವ ಕೌಶಲ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕೌಶಲ್ಯ ಸಪ್ತಾಹ ಆಚರಣೆ ನಿಮಿತ್ತ ಸಂಸ್ಥೆಯಲ್ಲಿ ಏರ್ಪಡಿಸಿದ ಒಂದು ದಿನದ ತಾಂತ್ರಿಕ ವಸ್ತುಪ್ರದರ್ಶನ ಸಂದರ್ಭದಲ್ಲಿ  ಮಾತನಾಡಿದರು.  ತಾಂತ್ರಿಕ ಶಿಕ್ಷಣದ ಮಹತ್ವ ಹಾಗೂ ಕೌಶಲ್ಯ ಅಭಿವೃದ್ಧಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪದುವಾ ಪ್ರೌಢಶಾಲೆ, ರಾಮಾಶ್ರಮ ಪ್ರೌಢಶಾಲೆ ಹಾಗೂ  ಕಿರಿಯ ತಾಂತ್ರಿಕ ತರಬೇತಿ ಶಾಲೆ ಇದರ ವಿದ್ಯಾರ್ಥಿಗಳು ಬಹುಮಾನ ಗಳಿಸಿದರು. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇರುವ ತರಬೇತಿ ಸೌಲಭ್ಯಗಳು ಹಾಗೂ ವ್ಯವಸ್ಥೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.   ದ.ಕ. ಜಿಲ್ಲೆಯ ಐ.ಟಿ.ಐ ಸಂಸ್ಥೆಗಳ ಶಿಕ್ಷಣಾರ್ಥಿಗಳು ಪ್ರಾಯೋಗಿಕ ತರಬೇತಿಯಲ್ಲಿ ತಯಾರಿಸಿದ ಮೊಡೆಲ್ ಹಾಗೂ ಉತ್ಪನ್ನಗಳ ವಸ್ತು ಪ್ರದರ್ಶನ ವೀಕ್ಷಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯಗಳ ಮಹತ್ವವನ್ನು ಅರಿತು ತಮ್ಮ ಸಂತೋಷ ವ್ಯಕ್ತಪಡಿಸಿದರು.

ನಿರುಪಮ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಎನ್.ಎಸ್.ಎಸ್. ಅಧಿಕಾರಿ ಆಲ್ವಿನ್ ಡಿಕುನ್ನ ಕಾರ್ಯಕ್ರಮ ಸಂಯೋಜಿಸಿದರು  ಎಂದು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

“ಸಂತ್ರಸ್ಥ ಪರಿಹಾರದ ಬಗ್ಗೆ ಅರಿವು ಕಾರ್ಯಾಗಾರ”

ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಜಿಲ್ಲಾ ಪೊಲೀಸ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮತ್ತು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ  16 ರಂದು ಜಿಲ್ಲಾ ಪೊಲೀಸ್ ಸಭಾಭವನ, ಮಂಗಳೂರು ಇಲ್ಲಿ ಜಿಲ್ಲೆಯ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ “ಸಂತ್ರಸ್ಥ ಪರಿಹಾರದ ಬಗ್ಗೆ ಅರಿವು ಕಾರ್ಯಾಗಾರ”ವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದ ಉದ್ಘಾಟನೆಯನ್ನು ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್‍ರಾವ್ ಬೋರಸೆ  ನೆರವೇರಿಸಿ ಮಾತನಾಡುತ್ತಾ ವಿವಿಧ ಅಪರಾಧ ಪ್ರಕರಣಗಳಲ್ಲಿ ನೊಂದವರ ಮತ್ತು ಸಂತ್ರಸ್ಥರ ನೆರವಿಗಾಗಿ ರಾಜ್ಯ ಸರ್ಕಾರ ಸಂತ್ರಸ್ಥ ಪರಿಹಾರವನ್ನು ನೀಡುತ್ತಿದ್ದು, ಈ ಬಗ್ಗೆ ಠಾಣಾ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಾಗೂ ಠಾಣೆಗೆ ಭೇಟಿ ನೀಡುವ ನೊಂದವರು ಮತ್ತು ಸಂತ್ರಸ್ಥರಿಗೆ ನೆರವನ್ನು ನೀಡುವ ಸಲುವಾಗಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಭಾಗವಹಿಸಿರುವ ಎಲ್ಲಾ ಸಿಬ್ಬಂದಿಗಳು ಇದರ ಅರಿವನ್ನು ಪಡೆದುಕೊಂಡು ಠಾಣೆಗೆ ಭೇಟಿ ನೀಡುವ ಸಂತ್ರಸ್ಥರಿಗೆ ನೆರವನ್ನು ನೀಡುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಬಳಿಕ ಎಸ್‍ಪಿ ಅವರು  ಮಹಿಳಾ ಪೊಲೀಸ್ ಸಿಬಂದಿಗಳ ಕುಂದು-ಕೊರತೆಗಳನ್ನು ಆಲಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ  ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಮಲ್ಲನಗೌಡ ಮಾತನಾಡುತ್ತಾ ಸಂತ್ರಸ್ಥ ಪರಿಹಾರ, ಅರ್ಜಿ ನಮೂನೆಗಳ ಭರ್ತಿ ಮಾಡುವಿಕೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಎ. ಉಸ್ಮಾನ್, ಮಹಿಳೆಯರ ಸುರಕ್ಷತೆಯ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳು, ನಿರ್ಭಯ ನಿಧಿ ಸ್ಥೈರ್ಯ ನಿಧಿಗಳ ಬಗ್ಗೆ ಮಾಹಿತಿ ನೀಡಿದರು.

ಎಎಸ್‍ಪಿ ಡಾ. ವೇದಮೂರ್ತಿ ಉಪಸ್ಥಿತರಿದ್ದರು.


Spread the love