ಉಚ್ಚಿಲ ದಸರಾ ಶೋಭಾ ಯಾತ್ರೆಗೆ ಸರ್ವ ಸಜ್ಜು
ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಎರಡನೇ ವರ್ಷದ ಉಚ್ಚಿಲ ದಸರಾ 2023ರ ಸಮಾರೋಪ ಮತ್ತು ವೈಭವದ ಶೋಭಾಯಾತ್ರೆ, ಜಲಸ್ತಂಭನ ಅ. 24ರಂದು ನಡೆಯಲಿದ್ದು ಅತ್ಯಂತ ಸುವ್ಯವಸ್ಥಿತವಾಗಿ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಶ್ರೀ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ ಶಂಕರ್ ಹೇಳಿದರು.
ಅವರು ಭಾನುವಾರ ಶೋಭಾ ಯಾತ್ರೆಯ ಸಂಭಂದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಶೋಭಾಯಾತ್ರೆಯು ಉಚ್ಚಿಲ ದೇವಳದಿಂದ ಹೊರಟು ಎರ್ಮಾಳು ಶ್ರೀ ಜನಾರ್ದನ ದೇವಳದವರೆಗೆ ಸಾಗಿ ಅಲ್ಲಿನ ಡಿವೈಡರ್ ಮೂಲಕ ತಿರುಗಿ ಉಚ್ಚಿಲ ಮೂಳೂರು, ಕಾಪು, ಕೊಪ್ಪಲಂಗಡಿ ವರೆಗೆ ಸಾಗಿ ಅಲ್ಲಿಂದ ಬೀಚ್ ರಸ್ತೆ ಮೂಲಕ ಕಾಪು ದೀಪಸ್ತಂಭ ತಲುಪಲಿದೆ ಎಂದರು.
ಸಂಜೆ 4.30ಕ್ಕೆ ಶ್ರೀ ಕ್ಷೇತ್ರದ ಮುಂಭಾಗ ವೈಭವದ ಶೋಭಾ ಯಾತ್ರೆಗೆ ಚಾಲನೆ ನೀಡಲಾಗುವುದು. 10 ವಿಗ್ರಹಗಳ ಟ್ಯಾಬ್ಲೋ ಮತ್ತು 40 ವಿವಿಧ ರೀತಿಯ ಇತರ ಟ್ಯಾಬ್ಲೋಗಳೊಂದಿಗೆ ಭಜನಾ ಸಂಕೀರ್ತನೆ, ಹುಲಿವೇಷ, ವಿವಿಧ ವೇಷಭೂಷಣ, ಚಂಡೆ ವಾದ್ಯ, ಗೊಂಬೆ ಕುಣಿತಗಳೊಂದಿಗೆ ನಡಿಗೆ ಮೂಲಕ ಶೋಭಾ ಯಾತ್ರೆ ಮುಂದುವರೆಯಲಿದೆ. ಸಂಜೆ 6 ಗಂಟೆಗೆ ಎರ್ಮಾಳು ತಲುಪಲಿದ್ದು, ಅಲ್ಲಿಂದ ಮುಂದುವರೆದು ರಾತ್ರಿ 10 ಗಂಟೆಗೆ ಕಾಪು ದೀಪಸ್ತಂಭ ತಲುಪಿ 10.30 ಗಂಟೆಯಿಂದ ಜಲಸ್ತಂಭನ ಆರಂಭಗೊಳ್ಳಲಿದ್ದು, 11 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕಾಪು ಬೀಚ್ ಬಳಿ ಗಂಗಾರತಿ ಹಾಗೂ 10ಸಾವಿರ ಮಹಿಳೆಯರಿಂದ ಸಾಮೂಹಿಕ ಮಂಗಳಾರತಿ ನಡೆಯಲಿದೆ. ಈ ಸಂದರ್ಭ ಸಮುದ್ರ ಮಧ್ಯದಲ್ಲಿ 50ಕ್ಕೂ ಅಧಿಕ ಮೀನುಗಾರಿಕಾ ಪರ್ಸೀನ್ ಮತ್ತು ಟ್ರಾಲ್ ಬೋಟುಗಳ ಪ್ರಖರ ಬೆಳಕು ಝಗಮಗಿಸಲಿದೆ ಎಂದರು.
ಹೆಚ್ಚುವರಿ ಎಸ್ಪಿ ಎಸ್ ಸಿದ್ದಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಚ್ಚಿ, ಕಾಪು ಸಿಪಿಐ ಜಯಶ್ರೀ ಎಸ್, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್, ಕ್ರೈಮ್ ಠಾಣಾಧಿಕಾರಿ ಸುದರ್ಶನ್ ದೊಡ್ಡಮನಿ, ಕಾಪು ಎಸ್ ಐ ಅಬ್ದುಲ್ ಖಾದರ್ ಸೂಕ್ತ ಸಲಹೆ ನೀಡಿದರು.
ಮೆರವಣಿಗೆ ದಿನ ಬೆಳಿಗ್ಗೆ 11 ಗಂಟೆಯಿಂದ ದೇವಳ ಮುಂಭಾಗದ ಸರ್ವಿಸ್ ರಸ್ತೆ ಸಂಚಾರ ಸಂಪೂರ್ಣ ನಿಷೇಧಿಸಲಾಗಿದ್ದು ಬಳಿಕ ಬರುವ ವಾಹನಗಳು ಪಶ್ಚಿಮದಲ್ಲಿ ಸರಸ್ವತಿ ಮಂದಿರ ಶಾಲಾ ಆವರಣ, ಪೂರ್ವದಲ್ಲಿ ಶ್ರೀ ದೇವಳದ ಹಿಂಬಾಗ ಮತ್ತು ಪಣಿಯೂರು ಕ್ರಾಸ್ ಬಳಿಯ ವಿಶಾಲ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡಬಹುದು. ಕೊಪ್ಪಲಂಗಡಿಯಿಂದ ಕಾಪು ಬೀಚ್ ವರೆಗೆ ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ. ಕೊಪ್ಪಲಂಗಡಿ ಒಳ ಪ್ರವೇಶಿಸಿದ ವಾಹನಗಳು ಟ್ಯಾಬ್ಲೋಗಳು ಪೊಲಿಪು ಮೂಲಕ ಹೊರತೆರಳಬೇಕು. ಈ ಸಂದರ್ಭ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಪೊಲಿಪು ಶಾಲೆ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ.
ಸಭೆಯಲ್ಲಿ ಹರಿಯಪ್ಪ ಕೋಟ್ಯಾನ್, ಸತೀಶ್ ಕುಂದರ್, ವಿನಯ್ ಕರ್ಕೇರಾ, ಮನೋಜ್ ಕಾಂಚನ್, ಶಂಕರ ಸಾಲ್ಯಾನ್, ಗುಂಡು ಬಿ ಅಮೀನ್, ವಾಸುದೇವ ಸಾಲ್ಯಾನ್, ಶಿವಕುಮಾರ್ ಮೆಂಡನ್, ಸರ್ವೋತ್ತಮ ಕುಂದರ್, ದಿನೇಶ್ ಎರ್ಮಾಳು, ವಿಶ್ವಾಸ್ ವಿ ಅಮೀನ್, ಸತೀಶ್ ಅಮಿನ್ ಪಡುಕೆರೆ, ಜಯ ಸಿ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.