Home Mangalorean News Kannada News ಉಡುಪಿಗೆ ಮೊದಲ ಬಾರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ರಿಗೆ ಅದ್ದೂರಿ ಸ್ವಾಗತ

ಉಡುಪಿಗೆ ಮೊದಲ ಬಾರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ರಿಗೆ ಅದ್ದೂರಿ ಸ್ವಾಗತ

Spread the love

ಉಡುಪಿಗೆ ಮೊದಲ ಬಾರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ರಿಗೆ ಅದ್ದೂರಿ ಸ್ವಾಗತ

ಉಡುಪಿ : ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇದೇ ಮೊದಲ ಬಾರಿಗೆ ಉಡುಪಿಗೆ ಬುಧವಾರ ಆಗಮಿಸಿದರು.

ಬೆಳಿಗ್ಗೆ 11.20ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ಗೆ ಆಗಮಿಸಿದ ರಾಷ್ಟ್ರಪತಿಗಳನ್ನು ಕರ್ನಾಟಕ ರಾಜ್ಯಪಾಲ ವಜೂಬಾಯಿವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ಜಿ.ಪಂ. ಅಧ್ಯಕ್ಷ ದಿನಕರ ಬಾಬು ಮತ್ತಿತರರು ಸ್ವಾಗತಿಸಿದರು.

ಅಲ್ಲಿಂದ ನೇರವಾಗಿ ಉಡುಪಿ ಪೇಜಾವರ ಮಠಕ್ಕೆ ಬೆಳಿಗ್ಗೆ 11.40ಕ್ಕೆ ರಾಷ್ಟ್ರಪತಿಗಳು ಆಗಮಿಸಿದರು. ಅವರನ್ನು ಮಠದ ದೀವಾಣರು ಸ್ವಾಗತಿಸಿದರು. ನಂತರ ಪೇಜಾವರ ಮಠದ ಒಳಕ್ಕೆ ರಾಷ್ಟ್ರಪತಿಗಳು ಆಗಮಿಸಿದರು. ಅಲ್ಲಿ ಮೊದಲೇ ಆಗಮಿಸಿದ್ದ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಗಳು ರಾಷ್ಟ್ರ್ರಪತಿಗಳನ್ನು ಸ್ವಾಗತಿಸಿ, ಮಠದ ಇತಿಹಾಸವನ್ನು ವಿವರಿಸಿದರು. ನಂತರ ರಾಷ್ಟ್ರಪತಿಗಳು ಪೇಜಾವರ ಮಠದ ಮೂಲದೇವರು ರಾಮವಿಠಲ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ರಾಷ್ಟ್ರಪತಿಗಳನ್ನು ಪೇಜಾವರ ಸ್ವಾಮೀಜಿಗಳು ಶಾಲು ಹೊದಿಸಿ, ಕೃಷ್ಣನ ಅಟ್ಟೆ ಪ್ರಭಾವಳಿ, ಯಕ್ಷಗಾನದ ಕೇದಗೆ ಮುಂಡಾಸು ತೊಡಿಸಿ ಗೌರವಿಸಿದರು. ಪೇಜಾವರ ಶ್ರೀಗಳನ್ನು ರಾಷ್ಟ್ರಪತಿಗಳು ಶಾಲು ಹೊದಿಸಿ ಗೌರವಿಸಿದರು. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಸ್ವಾಮೀಜಿಗಳು ಉಪಸ್ಥಿತರಿದ್ದರು.

ನಂತರ ಅಲ್ಲಿಂದ ನಿರ್ಗಮಿಸಿದ ರಾಷ್ಟ್ರಪತಿಗಳು ಮದ್ಯಾಹ್ನ 12.20ಕ್ಕೆ ಕೃಷ್ಣಮಠಕ್ಕೆ ಆಗಮಿಸಿದರು. ಅಲ್ಲಿ ಅವರನ್ನು ಮಂಗಳವಾದ್ಯ ಹಾಗೂ ವೇಧಘೋಷಗಳೊಂದಿಗೆ ಸ್ವಾಗತಿಸಿ, ಕೃಷ್ಣಮಠದ ಒಳಕ್ಕೆ ಕರೆದುಕೊಂಡು ಬರಲಾಯಿತು. ಕೃಷ್ಣ ದರ್ಶನ ಪಡೆದ ರಾಷ್ಟ್ರಪತಿಗಳು, ಪಕ್ಕದಲ್ಲಿಯೇ ಅಷ್ಟಮಠದ ಸ್ವಾಮೀಜಿಗಳೊಂದಿಗೆ ಆಸೀನರಾದರು. ರಾಷ್ಟ್ರಪತಿಗಳನ್ನು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಗಳು ಸ್ವಾಗತಿಸಿದರು. ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಬಗ್ಗೆ ರಾಷ್ಟ್ರಪತಿಗಳು ತಮ್ಮ ಅತೀವ ಸಂತೋಷ ವ್ಯಕ್ತಪಡಿಸಿದರು. ಪರ್ಯಾಯ ಸ್ವಾಮೀಜಿಗಳು ರಾಷ್ಟ್ರಪತಿಗಳನ್ನು ಶಾಲು ಹೊದಿಸಿ, ಕೃಷ್ಣನ ಪಂಚಲೋಹ ವಿಗ್ರಹ ನೀಡಿ ಸನ್ಮಾನಿಸಿದರು. ಪೇಜಾವರ ಸ್ವಾಮೀಜಿಗಳನ್ನು ರಾಷ್ಟ್ರಪತಿ ಭವನಕ್ಕೆ ಆಗಮಿಸಲು ರಾಷ್ಟ್ರಪತಿಗಳು ಆಹ್ವಾನಿಸಿದರು.

ಮಧ್ಯಾಹ್ನ 12.45ಕ್ಕೆ ರಾಷ್ಟ್ರಪತಿಗಳು ಕೃಷ್ಣಮಠದಿಂದ ಹೆಲಿಪ್ಯಾಡ್ಗೆ ಹೊರಟರು.


Spread the love

Exit mobile version