ಉಡುಪಿಯಲ್ಲಿ ಕೊರೋನಾ ಪಾಸಿಟಿವ್ ಗರ್ಭಿಣಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ
ಉಡುಪಿ: ಕೊರೋನಾ ಪಾಸಿಟಿವ್ ಗರ್ಭಿಣಿ ಮಹಿಳೆಯೋರ್ವರಿಗೆ ಉಡುಪಿಯ ಟಿ ಎಮ್ ಎ ಪೈ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆ ಮಾಡಿದ್ದು ಪ್ರಸ್ತುತ ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಗೆ ಸಿಜೇರಿಯನ್ ಹೆರಿಗೆ ಮಾಡಿಸಿದ್ದು ಪ್ರಥಮವಾಗಿದೆ.
22 ವರ್ಷದ ಕೋವಿಡ್-19 ಇದ್ದ ತುಂಬು ಗರ್ಭಿಣಿ ಮಹಿಳೆಯೊಬ್ಬರು ಜೂನ್ 17 ರಂದು ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ತುರ್ತು ಸಿಸೇರಿಯನ್ ಹೆರಿಗೆಗೆ ಒಳಗಾದರು. ಕಾರ್ಕಳ ಮೂಲದ ಈ ಮಹಿಳೆಯನ್ನು ಜೂನ್ 16 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ನವಜಾತ ಮಗು ಆರೋಗ್ಯವಾಗಿದೆ. ಪ್ರಸೂತಿ ತೊಂದರೆ ಕಾರಣಗಳಿಂದಾಗಿ ಈ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ರೋಗಿಗೆ ಇದು ಮೊದಲ ಶಸ್ತ್ರಚಿಕಿತ್ಸೆ. ಪ್ರಸೂತಿ ಶಸ್ತ್ರಚಿಕಿತ್ಸಕರಾದ ಡಾ. ಶಶಿಕಲಾ ಕೆ ಭಟ್ ಮತ್ತು ಡಾ. ಸುರಭಿ ಸಿನ್ಹಾ ಮತ್ತು ಅರಿವಳಿಕೆ ತಜ್ಞ ಡಾ.ರೋಶನ್ ಶೆಟ್ಟಿ ಅವರ ತಂಡಕ್ಕೆ ಶ್ರೀಮತಿ ವೆರೋನಿಕಾ, ಶ್ರೀಮತಿ ಅಶ್ವಿನಿ ಮತ್ತು ಶ್ರೀಮತಿ ಜಯಶ್ರೀ ಅವರ ಶುಶ್ರೂಷಾ ತಂಡ ಸಹಾಯ ಮಾಡಿತು. ನವಜಾತ ಶಿಶುವಿನ ಆರೈಕೆಯನ್ನು ಡಾ. ಆಶಿಶ್ ಗುಪ್ತಾ ಮತ್ತು ಡಾ.ಚೈತನ್ಯ ಅವರು ನೋಡಿಕೊಂಡರು.
ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಉಡುಪಿಯ ಜನರಿಗೆ ಸೇವೆ ಸಲ್ಲಿಸುತ್ತಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಸಂಬಂಧಿತ ಆಸ್ಪತ್ರೆಯಾದ ಡಾ. ಟಿಎಂಎ ಪೈ ಆಸ್ಪತ್ರೆ ಈ ವರ್ಷದ ಏಪ್ರಿಲ್ ಒಂದನೇ ತಾರೀಖಿನಿಂದ ಕೋವಿಡ್ -19ಗೆ ಮೀಸಲಾದ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್-19 ರೋಗಿಗಳಿಗೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ, ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.