ಉಡುಪಿಯಲ್ಲಿ ಪೋಲಿಗಳನ್ನು ಮಟ್ಟಹಾಕಲು ಕಾರ್ಯಾಚರಣೆಗಿಳದ ಅಬ್ಬಕ್ಕ ಪಡೆ
ಉಡುಪಿ: ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಸಿಬ್ಬಂದಿಯನ್ನೊಳಗೊಂಡ ‘ರಾಣಿ ಅಬ್ಬಕ್ಕ ಪಡೆ’ ರಚನೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಂಗಳವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಅಬ್ಬಕ್ಕ ಪಡೆಗೆ ಚಾಲನೆ ನೀಡಿದರು.
‘ರಾಣಿ ಅಬ್ಬಕ್ಕ’ ಪಡೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಸ್‌ಪಿ, ಚಿತ್ರದುರ್ಗದ ಓಬವ್ವ, ಸಾಗರದ ಕೆಳದಿ ಚೆನ್ನಮ್ಮ ಪಡೆಯ ಪ್ರೇರಣೆಯಿಂದ ರಾಣಿ ಅಬ್ಬಕ್ಕ ಪಡೆ ಆರಂಭಿಸಲಾಗಿದೆ ಎಂದರು.
ಈ ಪಡೆಯಲ್ಲಿ ಮಹಿಳಾ ಠಾಣೆಯ ಎಸ್‍ಐ ಹಾಗೂ ಎಎಸ್‍ಐ, ಮೂವರು ಮಹಿಳಾ ಸಿಬ್ಬಂದಿ, ಒಬ್ಬರು ಪುರುಷ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸದ್ಯ ನಗರ ಹಾಗೂ ಮಣಿಪಾಲ ಸುತ್ತಮುತ್ತ ಪಡೆ ಕಾರ್ಯಾಚರಣೆ ನಡೆಸಲಿದ್ದು, ಮುಂದೆ ಜಿಲ್ಲೆಗೆ ವಿಸ್ತರಿಸುವ ಆಲೋಚನೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಅಬ್ಬಕ್ಕ ಪಡೆ ಗಸ್ತು ತಿರುಗು ತ್ತಲಿರುತ್ತದೆ. ಮಹಿಳೆಯರಿಗೆ ತೊಂದರೆ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಮಹಿಳಾ ಠಾಣೆಯ ಪಿಎಸ್‌ಐ ರೇಖಾ ನಾಯಕ್, ವೆಲೆಂಟ್ ಸೆಮಿನಾ, ಕಲ್ಪನಾ ಬಾಂಗ್ಲೆ, ಸೇಸಮ್ಮ, ಮುಮ್ತಾಜ್, ಎಎಸ್‍ಐ ಮುಕ್ತ, ಕಾನ್‌ಸ್ಟೆಬಲ್ ರುದ್ರಮ್ಮ ಉಪಸ್ಥಿತರಿದ್ದರು