ಉಡುಪಿಯಲ್ಲಿ ಮುದ್ದು ಕೃಷ್ಣರ ವಿಶ್ವರೂಪ ದರ್ಶನ!
ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ನಡೆದ ಮುದ್ದು ಕೃಷ್ಣ ಬಾಲಕೃಷ್ಣ ಹಾಗೂ ಕಿಶೋರ ಕೃಷ್ಣ ಸ್ಪರ್ಧೆಗಳು ಅಷ್ಟಮಿಯ ರಂಗನ್ನು ಹೆಚ್ಚಿಸಿದ್ದು, ಮುದ್ದು ಮಕ್ಕಳ ಕೃಷ್ಣನ ವಿವಿಧ ವೇಷಗಳು ಕಣ್ಮನ ಸೆಳೆದವು.
ಮಠದ ರಾಜಾಂಗಣದಲ್ಲಿ, ಅನ್ನಬ್ರಹ್ಮ ಸಭಾಂಗಣ ಹಾಗೂ ಮಧ್ವಾಂಗಣದಲ್ಲಿ ನಡೆದ ಮಕ್ಕಳ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಸುಮಾರು 500ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ತಾಯಂದಿರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸುವ ದೃಶ್ಯ ಎಲ್ಲೆಂದರಲ್ಲಿ ಕಂಡು ಬಂದವು.
ಎಲ್ಲಿ ನೋಡಿದರಲ್ಲಿ ಹೆತ್ತಮ್ಮನ ಮಡಿಲಿನಲ್ಲಿ ಬಣ್ಣಬಣ್ಣದ ವೇಷಧಾರಿ ಶ್ರೀಕೃಷ್ಣನೇ ಕಂಡು ಬಂದ. ವೇದಿಕೆಯ ಹಿನ್ನಲೆಯಲ್ಲಿ ಜನಪ್ರಿಯ ಬಾಬಾ ಕೃಷ್ಣ ಭಕ್ತಿಗೀತೆ ಮೂಡಿಬರುತ್ತಿದ್ದಂತೆ ಹಾಲುಗಲ್ಲದ ಶ್ರೀಕೃಷ್ಣರು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಕೊಳಲುಧಾರಿಯಾಗಿ ಪ್ರತ್ಯಕ್ಷರಾದರು. ಸಿಕ್ಕಿದ 2ನಿಮಿಷ ಅವಯಲ್ಲಿ ತಮ್ಮ ಕೃಷ್ಣರ ಒಂದಷ್ಟು ಲೀಲೆ ತೋರಿಸುವಲ್ಲಿ ಅಮ್ಮಂದಿರು, ಅಜ್ಜಿಯಂದಿರು ಪ್ರಯತ್ನಿಸಿ ಸುಸ್ತಾದರು !
ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ ರಾಜಾಂಗಣಕ್ಕೆ ಆಗಮಿಸಿ ಸ್ಪರ್ಧೆಯನ್ನು ವೀಕ್ಷಿಸಿದರಲ್ಲದೆ ಬಳಿಕ ಎಲ್ಲಾ ಮಕ್ಕಳೊಂದಿಗೆ ಕುಳಿತು ಫೋಟೊ ತೆಗೆಸಿಕೊಂಡರು.
ಸ್ಪರ್ಧೆಗಳನ್ನು ವೀಕ್ಷಿಸಿಸಲು ಮೂರೂ ಸಭಾಂಗಣದಲ್ಲಿ ಸಾಕಷ್ಠು ಸಂಖ್ಯೆಯಲ್ಲಿ ಜನರು ಸೇರಿದ್ದರು. ನೆರೆದ ಸಾವಿರಾರು ಶ್ರೀಕೃಷ್ಣ ಭಕ್ತರು ಬಾಲಕೃಷ್ಣರ ತುಂಟಾಟವನ್ನು ಕಣ್ತುಂಬಿಕೊಂಡು ಆನಂದ ಪಟ್ಟರು.