ಉಡುಪಿಯಲ್ಲಿ ‘ಸುದ್ದಿ ಹುಲಿ’ಗಳ ಭರ್ಜರಿ ಭರಾಟೆ!
ಉಡುಪಿ: ಸದಾ ಸುದ್ದಿಯ ಹುಡುಕಾಟಕದಲ್ಲಿ ಮಗ್ನರಾಗಿರುತ್ತಿದ್ದ ಉಡುಪಿಯ ಪತ್ರಕರ್ತರ ತಂಡ ತಮ್ಮೆಲ್ಲಾ ಸುದ್ದಿಯ ಜಂಜಾಟಗಳನ್ನು ಬದಿಗಿಟ್ಟು ಸತತ ಮೂರು ಗಂಟೆಗಳ ನೈಜ ಹುಲಿಯಂತೆಯೇ ಕಾಣುವ ಬಣ್ಣವನ್ನು ಮೆತ್ತಿಕೊಂಡು ಕರಾವಳಿಯ ಜಾನಪದ ಕಲೆಯಾದ ಹುಲಿವೇಷದ ಕುಣಿತದ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿ ಉಡುಪಿ ಜಿಲ್ಲೆಯ ಪತ್ರಕರ್ತರು ಪ್ರೇಕ್ಷಕರು, ನಾಡಿನ ಹಿರಿಯ ಸಂಪಾದಕರು ಪತ್ರಕರ್ತರ ಎದುರು ಸೈ ಎನಿಸಿಕೊಂಡರು.
ಉಡುಪಿಯ ಐಎಮ್ ಎ ಭವನದಲ್ಲಿ ಕರ್ಣಾಟಕ ಮಾಧ್ಯಮ ಅಕಾಡೆಮಿ, ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದಲ್ಲಿ ನಡೆದ ಕರಾವಳಿ ಸಮಸ್ಯೆಗಳು – ಪರಿಹಾರ ಮಾಧ್ಯಮಗಳ ಪಾತ್ರ ಕುರಿತಾದ ವಿಚಾರ ಸಂಕಿರಣದಲ್ಲಿ ಎರಡನೇ ದಿನದ ಪತ್ರಕರ್ತರ ತರಬೇತಿ ಕಾರ್ಯಕ್ರಮದಲ್ಲಿ ನಗರದ ಪತ್ರಕರ್ತರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನಗರದ ಟಿವಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ನಝೀರ್ ಪೋಲ್ಯ, ಅವಿನ್ ಶೆಟ್ಟಿ, ಜೀವೇಂದ್ರ, ರಾಜು ಖಾರ್ವಿ, ಪರೀಕ್ಷಿತ್ ಶೇಟ್, ನಿತೇಶ್ ಮಂಚಿ, ಪ್ರಶಾಂತ್, ರಾಘವೇಂದ್ರ ಭಟ್ ಜೊತೆಯಾಗಿ ಸೇರಿ ಜಿಲ್ಲೆಯ ಹೆಸರಾಂತ ಹುಲಿವೇಷ ಬಳಗ ಮಾರ್ಪಳ್ಳಿ ಹುಲಿವೇಷ ತಂಡದ ಸಹಕಾರದೊಂದಿಗೆ ಯುವ ಪತ್ರಕರ್ತರು ನೆರೆದ ಪ್ರತಿಯೊಬ್ಬರಿಗೂ ರಂಜಿಸಿದರು.
ಪತ್ರಕರ್ತರು ಹುಲಿವೇಷದ ಪ್ರತಿಯೊಂದು ಭಂಗಿಗೂ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಭಾರೀ ಕರತಾಡನ, ಶಿಳ್ಳೆಯ ಮೂಲಕ ಯುವ ಹುಲಿಗಳಿಗೆ ಪ್ರೋತ್ಸಾಹ ನೀಡಿ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ಹುಲಿಗಳಿಗೆ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ನಗದು ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದಂತೆ ಇನ್ನಷ್ಟು ಹೊಸ ಹೆಜ್ಜೆಗಳೊಂದಿಗೆ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.
ಸತತ ಹತ್ತು ನಿಮಿಷ ಕುಣಿಯುವುದರೊಂದಿಗೆ ಪ್ರತಿಯೊಬ್ಬರನ್ನು ರಂಜಿಸಿದ ಸುದ್ದಿ ಹುಲಿಗಳ ಪೈಕಿ ಉತ್ತಮವಾಗಿ ಕುಣಿದ ಒಂದು ಹುಲಿಗೆ ಬಹುಮಾನವಾಗಿ ಹಣದ ಹಾರವನ್ನು ಹಾಕಿ ಗೌರವಿಸಲಾಯಿತು.
ಒಟ್ಟಾರೆ ಯಾವುದೇ ಹುಲಿವೇಷದ ಕುಣಿತದ ಬಗ್ಗೆ ಹೆಚ್ಚಿನ ಅನುಭವವಿಲ್ಲದೆ ಹೋದರೂ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರನ್ನು ರಂಜಿಸಿದ ಯುವ ಪತ್ರಕರ್ತರ ಪ್ರಯತ್ನ ಮಾತ್ರ ಅವರ ಆಸಕ್ತಿ ಮತ್ತು ಶೃದ್ಧೆಯನ್ನು ತೋರಿಸುತ್ತಿತ್ತು.
ಇದಲ್ಲದೆ ಇತರ ಪತ್ರಕರ್ತರಿಂದ ಕಂಸಾಳೆ ಪದ, ಗಾಯನ ಪ್ರದರ್ಶನ ಕೂಡ ಜರುಗಿತು.
ಎರಡನೇ ದಿನದ ಪತ್ರಕರ್ತರ ತರಬೇತಿಯನ್ನು ಹಿರಿಯ ಪತ್ರಿಕಾ ಸಂಪಾದಕ ಎ ಈಶ್ವರಯ್ಯ ಉದ್ಘಾಟಿಸಿದರು.