ಉಡುಪಿಯಲ್ಲಿ ಹುತಾತ್ಮರಾದ ಪೊಲೀಸರಿಗೆ ಗೌರವಾರ್ಪಣೆ

Spread the love

ಉಡುಪಿಯಲ್ಲಿ ಹುತಾತ್ಮರಾದ ಪೊಲೀಸರಿಗೆ ಗೌರವಾರ್ಪಣೆ

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಚಂದು ಮೈದಾನದಲ್ಲಿ ಭಾನುವಾರ ಕರ್ತವ್ಯದ ವೇಳೆ ಸಾವನಪ್ಪಿದ ಪೊಲೀಸರಿಗೆ ಗೌರವ ಸಲ್ಲಿಸುವ ಪ್ರಯುಕ್ತ ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ್ ಅವರು ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ ನಿಂಬರಗಿ ಅವರು 1959ರ ಅಕ್ಟೋಬರ್ 21ರಿಂದಲೇ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಅಂದು ಭಾರತ ಮತ್ತು ಚೀನಾದ ಗಡಿ ಪ್ರದೇಶದಲ್ಲಿರುವ ಲಡಾಕ್ ಪ್ರದೇಶದ ಅಕ್ಸಾಯ್ ಎಂಬಲ್ಲಿ ಸಿ.ಆರ್.ಪಿ.ಎಫ್ ಪಡೆಯ ಡಿ.ಎಸ್.ಪಿ ಕರಣ್ ಸಿಂಗ್ ಮತ್ತು ಅವರ ಸಿಬ್ಬಂದಿಗಳು ಗಸ್ತು ಕಾರ್ಯದಲ್ಲಿರುವಾಗ ಚೈನಾ ಪಡೆ ಇವರ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿತು.

ಆದರೆ ಇದಾವುದಕ್ಕೂ ಜಗ್ಗದ ಸೈನಿಕರು, ತಮ್ಮ ಕಡೆ ಉಸಿರಿನ ತನಕ ಹೋರಾಟ ನಡೆಸಿ ವೀರ ಮರಣವನ್ನಪ್ಪಿದರು. ಹಲವರು ಗಾಯಗೊಂಡರು. ಈ ದಿನದ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಯಿತು. ಹುತಾತ್ಮ ದಿನವನ್ನೂ ಆಚರಿಸಲಾಯಿತು. ಯೋಧರು ಪೋಲಿಸರ ಸೇವೆ ಅವಿಸ್ಮರಣೀಯ. ಅದರಂತೆ ಎಲ್ಲೆಡೆಯೂ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಕರ್ತವ್ಯದ ವೇಳೆ ಸಾವನಪ್ಪಿದ 414 ಹುತಾತ್ಮ ಪೊಲೀಸರ ಪಟ್ಟಿಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ ನಿಂಬರಗಿ ಅವರು ವಾಚಿಸಿದರು.
ಇದೇ ವೇಳೆ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಹುತಾತ್ಮರಿಗೆ ಗೌರವ ಸೂಚಿಸಿದರು. ಈ ಸಂದರ್ಭ ರಾಷ್ಟ್ರಗೀತೆ ಮೊಳಗಿತು.


Spread the love