ಉಡುಪಿಯ ಪಾಲಿಗೆ ‘ಗೃಹ ಲಕ್ಷ್ಮೀ’ ಯೂ ಇಲ್ಲ ಉಸ್ತುವಾರಿ ‘ಲಕ್ಷ್ಮೀ’ ಭಾಗ್ಯವೂ ಇಲ್ಲ : ದಿನೇಶ್ ಅಮೀನ್

Spread the love

ಉಡುಪಿಯ ಪಾಲಿಗೆ ‘ಗೃಹ ಲಕ್ಷ್ಮೀ’ ಯೂ ಇಲ್ಲ ಉಸ್ತುವಾರಿ ‘ಲಕ್ಷ್ಮೀ’ ಭಾಗ್ಯವೂ ಇಲ್ಲ : ದಿನೇಶ್ ಅಮೀನ್

ಉಡುಪಿ: ಜಿಲ್ಲೆಯ ಪಾಲಿಗೆ ಸರಕಾರದ ಗೃಹ ಲಕ್ಷ್ಮೀ ಯೋಜನೆಯ ಹಣ ಸರಿಯಾಗಿ ಫಲಾನುಭವಿಗಳಿಗೆ ಕೆಲವು ತಿಂಗಳಿಂದ ಬಿಡುಗಡೆಯಾಗಿಲ್ಲ ಹಾಗೂ ಈ ಇಲಾಖೆಯ ನೇತೃತ್ವ ವಹಿಸಿಕೊಂಡ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಉಡುಪಿಯ ಜನತೆಯ ಪಾಲಿಗೆ ಗೃಹ ಲಕ್ಷ್ಮೀ ಭಾಗ್ಯವೂ ಇಲ್ಲ ಉಸ್ತುವಾರಿ ಲಕ್ಷ್ಮೀ ಭಾಗ್ಯವೂ ಇಲ್ಲ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಗೃಹ ಲಕ್ಷ್ಮೀ ಯೋಜನೆಯನ್ನು ಆರಂಭಿಸಿದ್ದರೂ ಜಿಲ್ಲೆಯ ಎಲ್ಲಾ ಅರ್ಹ ಮಹಿಳೆಯರಿಗೆ ಇನ್ನೂ ತಲುಪಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರು ಜಿಲ್ಲೆಗೆ ಅತಿಥಿಯಂತೆ ಆಗಮಿಸಿ ಕೇವಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೂ ಯಾವುದೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಸಾಕಷ್ಟು ಮನೆ, ಬೆಳೆ ಆಸ್ತಿ ಪಾಸ್ತಿ ನಷ್ಟವಾದರೂ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸಿ ಪರಿಶೀಲನೆ ಮಾಡಿ ಪರಿಹಾರ ವಿತರಣೆ ಮಾಡಿಲ್ಲ. ಕಡಲ್ಕೊರೆತ ಸಮಸ್ಯೆ, ಡೆಂಗ್ಯೂ ಮಲೇರಿಯಾ ಸಹಿತ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದೊಂದಿಗೆ ಯಾವುದೇ ಸಭೆ ನಡೆಸಿಲ್ಲ. ಕಳೆದ ಹಲವು ದಿನಗಳಿಂದ ಉಡುಪಿಯಲ್ಲಿ ಪ್ರವಾಹದಿಂದ ಜನ ತತ್ತರಿಸಿ ಹೋದರು ಕನಿಷ್ಠ ಜಿಲ್ಲೆಗೆ ಭೇಟಿ ನೀಡುವ ಕೆಲಸ ಕೂಡ ಅವರಿಂದ ಆಗಿಲ್ಲ

ಈಗಾಗಲೇ ಉಡುಪಿ ಪರ್ಯಾಯ ಮಹೋತ್ಸವಕ್ಕೆ 10 ಕೋಟಿ, ಕಡಲ್ಕೊರೆತ ತಡೆಗೆ 5 ಕೋಟಿ ಅನುದಾನ ನೀಡುವ ಬಗ್ಗೆ ಘೋಷಿಸಿದ್ದ ಸಚಿವರ ಆಶ್ವಾಸನೆ ಇನ್ನೂ ಈಡೇರಿಲ್ಲ. ಉಡುಪಿಯ ಜನತೆ ಉಸ್ತುವಾರಿ ಸಚಿವರ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದು, ಇನ್ನಾದರೂ ಜಿಲ್ಲೆಯ ಸಮಸ್ಯೆ ಹಾಗೂ ಆಡಳಿತ ಯಂತ್ರವನ್ನು ಚುರುಕಾಗಿಸಲು ಉಸ್ತುವಾರಿ ಸಚಿವರು ಮುಂದಾಗಲಿ ಎಂದು ಅಗ್ರಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love