Home Mangalorean News Kannada News ಉಡುಪಿಯ ಮಾದಕ ವ್ಯಸನ ವಿರುದ್ದದ ಜಾಗೃತಿ ಅಭಿಯಾನ ದೇಶಕ್ಕೆ ಮಾದರಿಯಾಗಲಿ; ಈಶಪ್ರಿಯ ಸ್ವಾಮೀಜಿ

ಉಡುಪಿಯ ಮಾದಕ ವ್ಯಸನ ವಿರುದ್ದದ ಜಾಗೃತಿ ಅಭಿಯಾನ ದೇಶಕ್ಕೆ ಮಾದರಿಯಾಗಲಿ; ಈಶಪ್ರಿಯ ಸ್ವಾಮೀಜಿ

Spread the love

ಉಡುಪಿಯ ಮಾದಕ ವ್ಯಸನ ವಿರುದ್ದದ ಜಾಗೃತಿ ಅಭಿಯಾನ ದೇಶಕ್ಕೆ ಮಾದರಿಯಾಗಲಿ; ಈಶಪ್ರಿಯ ಸ್ವಾಮೀಜಿ

ಉಡುಪಿ: ಮಾದಕ ವ್ಯಸನದ ವಿರುದ್ದ ನಡೆಸುತ್ತಿರುವ ಅಭಿಯಾನ ಉಡುಪಿಯಿಂದ ದೇಶಕ್ಕೆ ನೀಡುವ ಮಹತ್ತರ ಕೊಡುಗೆಯಾಗಲಿ ಮತ್ತು ಈ ಮೂಲಕ ಭವಿಷ್ಯದಲ್ಲಿ ಕನಸಿನ ಭಾರತ ನಿರ್ಮಾಣಕ್ಕೆ ಯುವಶಕ್ತಿಯ ಸದ್ಬಳಕೆಯಾಗಲಿ ಎಂದು ಉಡುಪಿ ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥ ಹೇಳಿದರು.

ಅವರು ಶನಿವಾರ ಮಣಿಪಾಲದ ಕೆನರಾ ಮಾಲ್ ನಲ್ಲಿ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನ ವಿರುದ್ದ ಆಯೋಜಿಸಿದ ಸೆಲ್ಫಿ ವಿದ್ ಸಹಿ ಅಭಿಯಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮನಸ್ಸು ಮನುಷ್ಯನನ್ನು ಬಂಧನಕ್ಕೆ ಒಳಪಡಿಸುತ್ತದೆ. ದೇಹದ ಪಂಚೇಂದ್ರಿಯಗಳು ಕುದುರೆಯಂತೆ. ಶರೀರವೆಂಬ ರಥ ಎಲ್ಲಿ ಓಡಬೇಕೋ ಅತ್ತ ಕೊಂಡೊಯ್ಯುತ್ತದೆ. ಮನಸ್ಸು ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಇಲ್ಲದಿದ್ದರೆ ಜೀವನ ವ್ಯಸನವೆಂಬ ಪ್ರಪಾತಕ್ಕೆ ಬಿದ್ದು ಬಿಡುತ್ತದೆ.

ಮೆದುಳಿಗೂ ಇಂತಿಷ್ಟೇ ಎಂಬ ಶಕ್ತಿಯಿದೆ. ಕೆಟ್ಟ ವಿಚಾರ ಅದಕ್ಕೆ ತುಂಬಿಸದೆ ಸದ್ವಿಚಾರ ತುಂಬಿಸಬೇಕು. ಮಾದಕ ವ್ಯಸನಗಳು ಕ್ಷಣಿಕ ತೃಪ್ತಿ ಕೊಡುತ್ತದೆ. ನಮ್ಮ ಸಂಘ, ಸಂಗಾತಿ ಚೆನ್ನಾಗಿರಬೇಕು. ಸಂಘ ಚೆನ್ನಾಗಿದ್ದರೆ ಜೀವನ ಚೆನ್ನಾಗಿರುತ್ತದೆ. 12 ರಿಂದ 20ರ ವಯಸ್ಸು ಬಹಳ ಚಂಚಲದ ಕಾಲ. ಈ ಸಂದರ್ಭ ನಾವು ನಿಯಂತ್ರಣ ಸಾಧಿಸದಿದ್ದರೆ ಜೀವನದಲ್ಲಿ ಮತ್ತೆಂದೂ ಮೇಲೇಳಲು ಸಾಧ್ಯವಿಲ್ಲ.

ಕುಟುಂಬ ಪದ್ಧತಿ ಇಲ್ಲ. ಕೂಡು ಸಂಸಾರ ವ್ಯವಸ್ಥೆ ಕುಸಿದುಹೋಗಿದೆ. ನಮ್ಮಆಹಾರ ಪದ್ಧತಿ ಸರಿಯಿಲ್ಲದೆ ಇರುವುದಕ್ಕೆ ಮಕ್ಕಳು ದುಷ್ಚಟದತ್ತ ಮುಖಮಾಡುತ್ತಿದ್ದಾರೆ. ಆದ್ದರಿಂದ ಯುವ ಜನತೆ ಉತ್ತಮ ಮಾರ್ಗದಲ್ಲಿ ಸಾಗಲು ಇಂತಹ ಅಭಿಯಾನಗಳು ಮಾದರಿಯಾಗಲಿ ಎಂದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ ತಾತ್ಕಾಲಿಕ ಸಂತಸ, ಆನಂದ ಜೀವನವನವನ್ನೇ ಹಾಳು ಮಾಡುತ್ತದೆ. ಸ್ನೇಹಿತರ ಒತ್ತಡ ಕುಟುಂಬದ ಸಮಸ್ಯೆಯಿಂದ ಯುವಜನ ಮಾದಕ ವ್ಯಸನಗಳಿಗೆ ಬಲಿಯಾಗುತ್ತಾರೆ. ವ್ಯಸನ ಸಂಬಂಧಗಳ ಮೇಲೆ ಪರಿಣಾಮ ಬೀಳುತ್ತದೆ. ಮಾದಕ ವಸ್ತು ಬುದ್ಧಿಜೀವಿ ಮಾನವನನ್ನು ಗುಲಾಮರನ್ನಾಗಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನ ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ವ್ಯಸನದಿಂದ ದೇಹದ ಎಲ್ಲಾ ಅಂಗಗಳು ನಿಷ್ಕ್ರಿಯವಾಗುತ್ತದೆ. ದೇವರು ನೀಡಿದ ಜೀವ- ಜೀವನವನ್ನು ವ್ಯಸನ ಹಾಳು ಮಾಡುತ್ತದೆ. ಮಾದಕ ವ್ಯಸನ ಚಟ ಬಿಟ್ಟು ಜೀವನ ಆರಂಭಿಸುತ್ತೇನೆ ಎಂಬ ಪ್ರತಿಜ್ಞೆ ಯುವಜನತೆ ಇಂದಿನಿಂದಲೇ ಸ್ವೀಕರಿಸಬೇಕು ಎಂದರು.

ಮಲ್ಪೆ ಸಯ್ಯದಿನಾ ಅಬೂಬಕ್ಕರ್ ಸಿದ್ದೀಕಿ ಜಾಮೀಯಾ ಮಸೀದಿಯ ಧರ್ಮಗುರು ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಮಾತನಾಡಿ ದೇವರು ಕೆಡುಕನ್ನು ನಿರ್ಮೂಲನೆ ಮಾಡಲು ಒಳಿತಿನ ಸಂಸ್ಥಾಪನೆ ಮಾಡಲು ಮನುಷ್ಯರನ್ನು ಸೃಷ್ಟಿ ಮಾಡಿದ್ದಾನೆ. ಕೃಷಿ ಮಾಡಲು ಉತ್ತಮ ಜಮೀನು ಬೇಕು. ಕಸಕಡ್ಡಿ ಶುಚಿಮಾಡದಿದ್ದರೆ ಆ ಜಮೀನಿನಿಂದ ಉತ್ತಮ ಫಸಲು ಬೆಳೆಯಲು ಅಸಾಧ್ಯ.

ಸಜ್ಜನರ ಮೌನ ಸಮಾಜದ ಕೆಡುಕಿಗೆ ಕಾರಣ. ನಾನು ಸರಿಯಿದ್ದೇನೆ ಎಂದರೆ ಸಾಲದು. ನನ್ನ ಜೊತೆಗಿರುವವರು ಸರಿಯಿದ್ದಾರಾ ಎಂಬೂದನ್ನು ನೋಡಬೇಕು.ನೀವು ಪೋಷಕರು ಕೇವಲ ಪೋಷಕರಾಗದೆ ಮಕ್ಕಳ ಪಾಲಿಗೆ ತರಬೇತುದಾರರಾಗಬೇಕು. ದಾರಿ ತಪ್ಪಿದಾಗ ಸರಿಯಾದ ದಾರಿಗೆ ತರುವ ಕೆಲಸ ನಿಮ್ಮಿಂದ ಆಗಬೇಕೆಂದು ಪೋಷಕರಿಗೆ ಸಲಹೆ ನೀಡಿದರು.

ಪ್ರಶಸ್ತಿ ವಿಜೇತ ನಟ ವಿಜಯ್ ಮಯ್ಯ ಐಲ ಮಾತನಾಡಿ ಮನಸ್ಸು ನಿಯಂತ್ರಣದಲ್ಲಿ ಇಡದಿದ್ದರೆ ಮಾದಕ ವ್ಯಸನಗಳು ಆವರಿಸಿಬಿಡುತ್ತದೆ. ಹಟದಿಂದ ಚಟ ಶುರುವಾಗುತ್ತದೆ. ಪೋಷಕರ ಅತಿಯಾದ ಶಿಸ್ತು ಕೂಡಾ ಮಕ್ಕಳನ್ನು ದಾರಿ ತಪ್ಪುವಂತೆ ಮಾಡುತ್ತದೆ. ಕಲಾವಿದರು, ಮಾಧ್ಯಮ ಗಳು ಪ್ರಭಾವಿ ಮಾಧ್ಯಮಗಳು. ದುಷ್ಚಟ ನಿವಾರಣೆಯ ಬಗ್ಗೆ ಈ ಎರಡು ಕ್ಷೇತ್ರ ಜನಜಾಗೃತಿ ಮೂಡಿಸಬೇಕು.

ಕಾರ್ಯಕ್ರಮಕ್ಕೆ ಅದಮಾರು ಸ್ವಾಮೀಗಳು ವಿದ್ಯಾರ್ಥಿಗಳೊಂದಿಗೆ ಉಡುಪಿಯಿಂದ ಮಣಿಪಾಲದ ವರೆಗೆ ನಡೆದುಕೊಂಡು ಬಂದು ಗಮನ ಸೆಳೆದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆನರಾ ಮಾಲ್ ವ್ಯವಸ್ಥಾಪಕ ಪ್ರಕಾಶ್, ಅಕ್ಯುಮೆನ್ ಟ್ರೈನಿಂಗ್ ಸೆಂಟರ್ ಇದರ ಮ್ಯಾನೇಜಿಂಗ್ ಟ್ರಸ್ಟಿ ಜೊಯೆಲ್ ಸೋನ್ಸ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಉಪಸ್ಥಿತರಿದ್ದರು.

ದಿವಾಕರ ಹಿರಿಯಡ್ಕ ಸ್ವಾಗತಿಸಿ, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ವಂದಿಸಿದರು. ಸಂತೋಷ್ ಸರಳೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version