ಉಡುಪಿಯ ಸಮಾಜಸೇವಕ ನಿತ್ಯಣ್ಣರಿಗೆ 60ರ ಸಂಭ್ರಮಕ್ಕೆ ಅಭಿಮಾನಿಗಳಿಂದ ಅದ್ದೂರಿ ನಿತ್ಯ ಆನಂದೋತ್ಸವ

Spread the love

ಉಡುಪಿಯ ಸಮಾಜಸೇವಕ ನಿತ್ಯಣ್ಣರಿಗೆ 60ರ ಸಂಭ್ರಮಕ್ಕೆ ಅಭಿಮಾನಿಗಳಿಂದ ಅದ್ದೂರಿ ನಿತ್ಯ ಆನಂದೋತ್ಸವ

ಉಡುಪಿ: ಉಡುಪಿಯ ಖಾತ್ಯ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ನಿತ್ಯಾನಂದ ಒಳಕಾಡು ಅಭಿಮಾನಿ ಬಳಗದ ವತಿಯಿಂದ ನಿತ್ಯ ಆನಂದೋತ್ಸವ ಕಾರ್ಯಕ್ರಮ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಸದಾ ಸಮಾಜ ಸೇವೆಯೇ ತನ್ನ ಗುರಿಯಾಗಿಸಿಕೊಂಡು ಬದುಕುತ್ತಿರುವ ನಿತ್ಯಾನಂದ ಒಳಕಾಡು ಅವರಿಗೆ ಅವರ ಅಭಿಮಾನಿ ಬಳಗದ ವತಿಯಿಂದ ಅದ್ದೂರಿ ಸನ್ಮಾನ ಮಾಡಲಾಯಿತು. ನಿತ್ಯಾನಂದ ಅವರನ್ನು ಶತಾಯುಷಿ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡೋಲುವಾದಕ ಗುರುವ ಕೊರಗ ಅವರು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಬಳಿಕ ಮಾತನಾಡಿದ ನಿತ್ಯಾನಂದ ಒಳಕಾಡು ಅವರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳನ್ನು ಸಭೆಯ ಮುಂದೆ ಹಂಚಿಕೊಂಡ ನಿತ್ಯಾನಂದ ಅವರು, ತಮ್ಮ ಕೈಕಾಲು ನಡೆಯುವವರೆಗೆ ನಿಸ್ವಾರ್ಥ ಸಮಾಜ ಸೇವೆ ಮಾಡುವುದಾಗಿ ತಿಳಿಸಿದರಲ್ಲದೇ, ಮರಣಾನಂತರವೂ ತಮ್ಮ ಅಂಗಾಂಗಗಳ ಮೂಲಕ ಬೇರೆಯವರ ಬದುಕಿಗೆ ಆಧಾರವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ನಿವೃತ್ತ ಪ್ರಾಂಶುಪಾಲ ಪ್ರೊ. ನೇರಿ ಕರ್ನೇಲಿಯಾ ಅವರು ಅಭಿನಂದನಾ ಭಾಷಣ ಮಾಡಿದರು. ದೀಪ ತನಗಾಗಿ ಬೆಳಗುವುದಿಲ್ಲ, ಅದರಂತೆ ನಿತ್ಯಾನಂದ ಅವರು ತನಗಾಗಿ ಬದುಕುತ್ತಿಲ್ಲ, ತಮ್ಮ ಕಷ್ಟಗಳನ್ನು ಮರೆತು ಇತರರಿಗೆ ಸಹಾಯ ಮಾಡುವ ನಿತ್ಯಾನಂದ ಅವರು ಸಮಾಜದ ಎಲ್ಲಾ ವರ್ಗದವರಿಗೂ ರೋಲ್ ಮಾಡೆಲ್ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ನಿತ್ಯಾನಂದ ಅವರ ಬಗ್ಗೆ ತಯಾರಿಸಲಾಗಿರುವ ಸಾಕ್ಷ್ಯಚಿತ್ರದ ಸೀಡಿಯನ್ನು ಉದ್ಯಮಿ ಪುರುಷೋತ್ತಮ ಶೆಟ್ಟಿ ಮತ್ತು ಯುವಕವಿ ತಾರಾನಾಥ ಮೇಸ್ತ ಇವರ ಕಥಾಸಂಕಲನ ಪ್ರೇಮಾಯಣವನ್ನು ಉದ್ಯಮಿ ಮನೋಹರ ಶೆಟ್ಟಿ ಅವರು ಬಿಡುಗಡೆಗೊಳಿಸಿದರು. ವಿನಯಚಂದ್ರ ಮತ್ತು ಸಾಸ್ತಾನ ಮಿತ್ರರು ಸೀಡ್ ಬಾಲ್ ಮತ್ತು ಗಿಡಗಳನ್ನು ಉಪಸ್ಥಿತರಿಗೆ ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಿತ್ಯಾನಂದ ಅಭಿನಂದನಾ ಸಮಿತಿಯ ಅಧ್ಯಕ್ಷ ಶ್ರೀಧರ್ ದೇವಾಡಿಗ ವಹಿಸಿದ್ದರು. ಅತಿಥಿಗಳಾಗಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಶಂಕರಪುರದ ವಿಶ್ವಾಸದ ಮನೆಯ ನಿರ್ದೇಶಕ ಫಾಸ್ಚರ್ ಸುನಿಲ್ ಮ್ಯಾಥ್ಯೂ ಡಿಸೋಜ ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು ಸ್ವಾಗತಿಸಿದರು, ಖಜಾಂಚಿ ಸದಾನಂದ ಕಾಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸದಸ್ಯರಾದ ಪಲ್ಲವಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು, ಪ್ರಬಾಕರ ಕೆ.ಎಸ್. ಸನ್ಮಾನ ಪತ್ರ ವಾಚಿಸಿದರು, ಬಾಲಗಂಗಾಧರ ರಾವ್ ವಂದಿಸಿದರು.


Spread the love