ಉಡುಪಿ : ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವ ಹೊಣೆ ಎಲ್ಲರದ್ದು. ಆದರೆ ಅರಣ್ಯ ನಾಶದ ಇಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆಗೆ ಕಠಿಣ ಕ್ರಮಗಳು ಅನಿವಾರ್ಯ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ ರಮಾನಾಥ ರೈ ಹೇಳಿದರು.
ಇಂದು ಅರಣ್ಯ ಇಲಾಖೆ ಉಡುಪಿಯ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಸಭಾ ಭವನದಲ್ಲಿ ಆಯೋಜಿಸಲಾದ ‘ಲಕ್ಷ –ವೃಕ್ಷ ಅಭಿಯಾನ ಉದ್ಘಾಟನಾ ಕಾಯಕ್ರಮ’ ನೆರವೇರಿಸಿ ಮಾತನಾಡುತ್ತಿದ್ದರು.
ಅರಣ್ಯ ಹಕ್ಕು ಸಂರಕ್ಷಣೆ ಕಾನೂನು, ವನ್ಯ ಜೀವಿ ಸಂಬಂಧ ಕಾನೂನುಗಳಿಂದ ಜನರಿಗೆ ಇಲಾಖೆ ಬಗ್ಗೆ ಅಸಮಾಧಾನ ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಇಲಾಖೆ ಜನಸ್ನೇಹಿ ಹಾಗೂ ಜನಪರ ನಿಲುವುಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದರು.
ಇಲಾಖೆ ಕೃಷಿ ಪ್ರೋತ್ಸಾಹ ಯೋಜನೆ, ಚಿಣ್ಣರ ವನ್ಯದರ್ಶನದಂತಹ ಯೋಜನೆಗಳನ್ನು ಹಮ್ಮಿಕೊಂಡಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆಯೂ ಸಮಗ್ರ ಮಾಹಿತಿಯನ್ನು ಜನರಿಂದಲೇ ಅಭಿಪ್ರಾಯ ಸಂಗ್ರಹಿಸಿ ತಯಾರಿಸಿ ಸಲ್ಲಿಸಲಾಗಿದೆ ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿದ್ದ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅವರು, ಪ್ರಕೃತಿ, ಪರಿಸರ, ಜನಜೀವನ ಎಲ್ಲರ ಹಿತಕಾಯಲು ಸರ್ಕಾರ ಬದ್ಧವಾಗಿದ್ದು, ಜನಾಭಿಪ್ರಾಯದ ಆಧಾರದ ಮೇಲೆ ನೀತಿ ನಿರೂಪಿಸಲಾಗುತ್ತಿದೆ. ಇತ್ತೀಚೆಗೆ ವಾರ್ತಾ ಇಲಾಖೆಯಿಂದ ಹಾವಂಜೆ ಗ್ರಾಮಪಂಚಾಯಿತಿಯಲ್ಲಿ ಅಯೋಜಿಸಲಾದ ರೈತ ಸಾಂತ್ವನ ಕಾರ್ಯಕ್ರಮದಲ್ಲಿ ರೈತರು ಕಾಡುಪ್ರಾಣಿಗಳಿಂದ ಪಡುವ ಬವಣೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ. ಮಂಗಗಳು ಮತ್ತುಕಾಡುಪ್ರಾಣಿಗಳ ಹಾವಳಿಯಿಂದ ರೈತರು ನೊಂದಿದ್ದಾರೆ; ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅರಣ್ಯ ಸಚಿವರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಕೈಗಾರಿಕ ಅಭಿವೃದ್ಧಿ ವೇಳೆ ನಮ್ಮ ಪರಿಸರದ ಧಾರಣಾ ಸಾಮಥ್ರ್ಯದ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕರಾದ ಪ್ರಮೋದ್ ಮಧ್ವರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸುನೀತಾ ನಾಯ್ಕ್, ನಗರಸಭೆ ಅಧ್ಯಕ್ಷ ಪಿ. ಯುವರಾಜ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಮಲ್ಲಿಕಾ, ಗೋಪಿ ನಾಯ್ಕ್, ಸಾಬೂನು ಮತ್ತು ಮಾರ್ಜಕ ಮಂಡಳಿ ನಿಗಮದ ಅಧ್ಯಕ್ಷೆ ವೆರೊನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ ಸಂಜಯ್ ಬಿಜ್ಜೂರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಕಾರ್ಯಕ್ರಮದ ಉದ್ದೇಶ ಜನರಲ್ಲಿ ಕಾಡಿನ ಬಗ್ಗೆ ಅರಿವು, ಪ್ರೀತಿ ಬೆಳೆಸುವುದು ಎಂದರು. ಮರಗಳಿಂದ ಮಾತ್ರ ನೀರು ಉತ್ಪಾದನೆ ಸಾಧ್ಯ ಎಂದ ಅವರು, ಅರಣ್ಯೀಕರಣ ಪ್ರತಿಯೊಬ್ಬರು ಕೊಡುಗೆ ನೀಡಬೇಕೆಂದರು.
ಲಕ್ಷ ವೃಕ್ಷ ಅಭಿಯಾನದಡಿ ಮಾನವ ಜೀವನಕ್ಕೆ ಅಗತ್ಯವಾದ ಭೂ ಭಾಗದ ಶೇ. 33ರಷ್ಟು ಭಾಗದಲ್ಲಿ ಅರಣ್ಯಗಳನ್ನು ಬೆಳೆಸಲು, ಭೂಮಿಗೆ ಹಸಿರು ಹೊದಿಕೆ ನೀಡುವ ಬಗ್ಗೆ ಲಕ್ಷ ಲಕ್ಷ ಗಿಡಗಳನ್ನು ಅರಣ್ಯ ಹಾಗೂ ಅರಣ್ಯೇತರ ಸ್ಥಳಗಳಲ್ಲಿ ನೆಡುವ ಮಹತ್ವಾಕಾಂಕ್ಷಿ ಯೋಜನೆಯೇ ಲಕ್ಷ ವೃಕ್ಷ ಅಭಿಯಾನ ಎಂದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್ ಜೆ ಭಟ್, ಗೇರು ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಣ್ಣ, ರಾಜಗೋಪಾಲ್ ಶೆಟ್ಟಿ,ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್ ನೇಟಾಲ್ಕರ್ ಸ್ವಾಗತಿಸಿದರು.
ಡಾ ಎನ್ ಎ ಮಧ್ಯಸ್ಥ, ಪ್ರೊ. ಗೋಪಾಲಕೃಷ್ಣ, ಡಾ ನಾರಾಯಣ ಬಿ ಅಂಚನ್, ಸುಭೋಧ್ ಕುಮಾರ್ ಮಲ್ಲಿ, ಮೊಹಮ್ಮದ್ ಅಲಿ ಅಬ್ಬಾಸ್ ಇವರನ್ನು ಅರಣ್ಯ ಸಂರಕ್ಷಣೆಗೆ ನೀಡಿದ ಕೊಡುಗೆಗಾಗಿ ಸನ್ಮಾನಿಸಲಾಯಿತು.
ಅರಣ್ಯ ಬೆಳೆಸಲು ನೆರವಾದವರಿಗೆ ಸನ್ಮಾನ, ಕೊಡವೂರಿನಲ್ಲಿ ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟ ಕೃಷಿಕ ಗಣೇಶ್ ನಾಯಕ್ ಅವರ ಪತ್ನಿಗೆ ಐದು ಲಕ್ಷ ರೂ. ಪರಿಹಾರವನ್ನು ಅರಣ್ಯ ಇಲಾಖೆಯಿಂದ ನೀಡಲಾಯಿತು. ಕಾಡುಪ್ರಾಣಿಗಳ ದಾಳಿಯಿಂದ ಮೃತಪಟ್ಟ ಸಾಕುಪ್ರಾಣಿಗಳ ಮನೆಯವರಿಗೆ 10,000 ರೂ. ಪರಿಹಾರವನ್ನೂ ಇಂದೇ ವಿತರಿಸಲಾಯಿತು.