ಉಡುಪಿ: ಇಸ್ಲಾಂ ಧರ್ಮದ ವಿರುದ್ದ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತ ಕುಮಾರ್ ಹೆಗ್ಡೆಯವರ ಮೇಲೆ ಸರಕಾರ ಕಾನೂನು ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.
ಸಂಸದ ಹೆಗಡೆಯವರು ಭಾನುವಾರ ಶಿರಸಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ನೀಡಿದ ಹೇಳಿಕೆ ಭಾರತದ ಸಂವಿಧಾನ ಅಖಂಡತೆ ಮತ್ತು ಜಾತ್ಯಾತೀತ ವ್ಯವಸ್ಥೆಯ ವಿರುದ್ಧವಾಗಿದೆ. ಇಸ್ಲಾಮ್ ಭಾರತದ ಮಟ್ಟಿಗೆ ಅಲ್ಲದೆ ವಿಶ್ವ ಶಾಂತಿಗೂ ಅಪಾಯ ಇದನ್ನು ಮೂಲೋತ್ಪಾಟನೆಗೊಳಿಸದೆ ಹೋದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸದು ಎಂಬ ಹೇಳಿಕೆಯನ್ನು ನೀಡಿದ್ದು, ಮತ್ತು ಅದನ್ನು ತನ್ನದೇ ಶಬ್ಧದಲ್ಲಿ ಮುದ್ರಿಸುವಂತೆ ಮಾಧ್ಯಮದವರಿಗೆ ಒತ್ತಾಯಿಸಿದ್ದು, ಅತೀರೇಕವಾಗಿದೆ. ಹಿಟ್ಟರ್ ಕೂಡ ಜರ್ಮನಿಯ ಹೊರತಾಗಿ ಪ್ರಪಂಚದ ಮೇಲೆ ಫ್ಯಾಶಿಸಂ ಅನ್ನು ಹೇರುವ ಉದ್ದೇಶ ಹೊಂದಿರಲಿಲ್ಲ ಆದರೆ ಆರ್ ಎಸ್ ಎಸ್ ಮತ್ತು ಸಂಘ ಪರಿವಾರದಲ್ಲಿ ಪಳಗಿದ ಅನಂತ ಕುಮಾರ್ ಹಿಟ್ಲರನ್ನು ಮೀರಿಸುವ ಕೋಮು ದ್ವೇಷವನ್ನು ಹೊಂದಿದ್ದು, ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಿದೆ. ಓರ್ವ ಸಾರ್ವಜನಿಕ ವ್ಯಕ್ತಿಯಾಗಿದ್ದುಕೊಂಡು ಸಂವಿಧಾನದ ಮೇಲೆ ಪ್ರಮಾಣ ಮಾಡಿದಂತಹ ವ್ಯಕ್ತಿಯು ಸಂವಿಧಾನ ವಿರೋಧಿ ಮತ್ತು ಕೋಮು ದ್ವೇಷದ ಹೇಳಿಕೆಯು ಕರಾವಳಿಯಲ್ಲಿ ಕೋಮು ಗಲಭೆಯ ಕಿಡಿ ಹೊತ್ತಿಸುವ ಪ್ರಯತ್ನ ಎಂದು ಹೇಳಬಹುದು.
ಅನಂತ ಕುಮಾರ್ ಹೆಗ್ಡೆಯವರು ಯಾವುದೇ ಜಾತಿ ಧರ್ಮದ ಪ್ರತಿನಿಧಿಯಲ್ಲ ಬದಲಾಗಿ ಉತ್ತರ ಕನ್ನಡ ಜಿಲ್ಲೆಯ ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರನ್ನು ಸೇರಿಕೊಂಡ ಸರ್ವರ ಪ್ರತಿನಿಧಿಯಾಗಿದ್ದಾರೆ. ಆದುದರಿಂದ ಸಂಸದರು ತನ್ನ ಹೇಳಿಕೆಯ ಮುಕಾಂತರ ಒರ್ವ ಪ್ರಜಾಪ್ರತಿನಿಧಿಯ ಮೇರೆಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಕೋಮು ಉನ್ಮಾನದ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ. ಆದುದರಿಂದ ಸರಕಾರ ಅವರ ಮೇಲೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ಫಾಕ್ ಅಹಮ್ಮದ್ ಆಗ್ರಹಿಸಿದ್ದಾರೆ.