ಉಡುಪಿ: ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ, ರಸ್ತೆ ಸುರಕ್ಷತಾ ನಿಯಲ ಪಾಲನೆಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಕಡ್ಡಾಯ ಕಾನೂನನ್ನು ಜನಪ್ರಿಯಗೊಳಿಸಲು ಉಡುಪಿ ಜಿಲ್ಲಾ ಎಸ್ ಪಿ ಅಣ್ಣಾಮಲೈ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ಸಂಬಂಧ ಗುರುವಾರ ಹೆಲ್ಮೆಟ್ ಕಡ್ಡಾಯಗೊಳಿಸುವ ಜಾಗೃತಿ ರ್ಯಾಲಿ ನಡೆಸಿದ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ ಕಲ್ಯಾಣಪುರದಿಂದ ಉಡುಪಿಯಲ್ಲಿ ಸಂಚರಿಸಿದರು.
ಕಾಲೇಜಿನ ಸಂಚಾಲಕ ರೆ. ಫಾ. ಸ್ಟ್ಯಾನಿ ಬಿ. ಲೋಬೊ ಕಾಲೇಜಿನ ಆವರಣದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ರ್ಯಾಲಿ ಸಂತೆ ಕಟ್ಟೆ, ಅಂಬಾಗಿಲು, ಗುಂಡಿಬೈಲು, ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಡಯಾನ ಸರ್ಕಲ್, ಜೋಡುಕಟ್ಟೆ, ಬ್ರಹ್ಮಗಿರಿ ಸರ್ಕಲ್ ಮೂಲಕ ಸಾಗಿ ಎಸ್‍ಪಿ ಕಚೇರಿ ಬಳಿ ಕೊನೆಗೊಂಡಿತು.
ಕಾಲೇಜಿನ ಪ್ರಾಂಶುಪಾಲ ಡಾ. ನೇರಿ ಕರ್ನೇಲಿಯೋ ಮಾತನಾಡಿ ಅ.1ರಿಂದ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಲ್ಮೆಟ್ ಕಡ್ಡಾಯವಾಗಿ ಧರಿಸುವ ಕುರಿತ ನಿಯಮವೊಂದನ್ನು ಕಾಲೇಜು ಆಡಳಿತ ಮಂಡಳಿಗಳ ಮೂಲಕ ತರಲಾಗುವುದು ಎಂದು ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದರಿಂದ ಪ್ರೇರಿತರಾದ ಕಾಲೇಜಿನ ದ್ವಿಚಕ್ರ ಹೊಂದಿರುವ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ ಕಾಲೇಜಿಗೆ ಬರಲು ನಿರ್ಧರಿಸಿದ್ದರು. ಆ ಹಿನ್ನೆಲೆಯಲ್ಲಿ ರ್ಯಾಲಿಯನ್ನು ನಡೆಸಲು ನಿರ್ಧರಿಸಲಾಯಿತು. ಇದು ಇತರರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.
ಪೋಲಿಸ್ ಅಧೀಕ್ಷಕ ಅಣ್ಣಾಮಲೈ ಮಾತನಾಡಿ, ಹೆಲ್ಮೆಟ್ ಕಡ್ಡಾಯ ವಿಚಾರದಲ್ಲಿ ಪೋಲಿಸ್ ಇಲಾಖೆಗಿಂತ ಜಿಲ್ಲೆಯ ಶಿಕ್ಷಣ ಸಂಸ್ಧೆಗಳು ಹೆಚ್ಚು ಉತ್ಸಾಹ ತೋರಿ ತಮ್ಮ ಕಾಲೇಜಿನ ದ್ವಿಚಕ್ರ ವಾಹನ ಹೊಂದಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ನಿರ್ಣಯ ಕೈಗೊಂಡಿದೆ. ಈ ವಿಚಾರದಲ್ಲಿ ಕಳೆದ ಒಂದು ತಿಂಗಳಿನಲ್ಲಿ 17 ಕಾಲೇಜುಗಳಿಗೆ ಬೇಟಿ ನೀಡಲಾಗಿದೆ, 15ಸಾವಿರ ಮಂದಿ ವಿದ್ಯಾರ್ಥಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಸರ್ಕಾರದ ಆದೇಶವಿಲ್ಲದಿದ್ದರೂ ಪೆÇಲೀಸರ ಒಂದು ಮಾತಿಗೆ ಅದ್ಭುತ ಬೆಂಬಲ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ. ಇದು ಆರಂಭ ಮಾತ್ರ, ಇದೇ ರೀತಿ ಜನರಿಂದಲೂ ಸಹಕಾರ ಸಿಕ್ಕರೆ ಸರ್ಕಾರದ ಆದೇಶವಿಲ್ಲದಿದ್ದರೂ ಹೆಲ್ಮೆಟ್ ಕಡ್ಡಾಯ ಮಾಡಿದ ಪ್ರಥಮ ಜಿಲ್ಲೆ ಎಂಬ ಕೀರ್ತಿಗೆ ಉಡುಪಿ ಜಿಲ್ಲೆ ಪಾತ್ರವಾಗಲಿದೆ ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ಎಎಸ್‍ಪಿ ಸಂತೋಷ್ ಕುಮಾರ್, ಡಿವೈಎಸ್‍ಪಿ ಚಂದ್ರಶೇಖರ್, ಟ್ರಾಫಿಕ್ ಇನ್ಸ್‍ಪೆಕ್ಟರ್ ಮಧು, ನಗರಠಾಣಾ ಎಸ್‍ಐ ಗಿರೀಶ್, ಮಲ್ಪೆ ಠಾಣಾ ಎಸ್‍ಐ ರವಿಕುಮಾರ್, ಕಾಲೇಜಿ ರೋವರ್ಸ್ ಲೀಡರ್ ಡಾ. ಜಯರಾಮ್ ಶೆಟ್ಟಿಗಾರ್, ಎನ್ನೆಸ್ಸೆಸ್ ಅದಿಕಾರಿ ನಿತ್ಯಾನಂದ ಶೆಟ್ಟಿ, ಎನ್‍ಸಿಸಿ ಅಧಿಕಾರಿ ಮರ್ವಿನ್ ಡಿಸೋಜಾ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ನಡೆದ ಸಭೆಯಲ್ಲಿ ನಗರಸಭಾ ಅಧ್ಯಕ್ಷ ಯುವರಾಜ್ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ನಾಯಕ್ ಮಾತನಾಡಿದರು.