ಉಡುಪಿ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಆರೋಪಿ ಬಂಧನ
ಉಡುಪಿ: ನಗರದಲ್ಲಿ ಐದು ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ಕಿರುಕಳ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ನಿವಾಸಿ ಮುತ್ತು (35) ಎಂದು ಗುರುತಿಸಲಾಗಿದೆ.
ಇತ್ತೀಚಿಗೆ ಉಡುಪಿಯಲ್ಲಿ ನಡೆದ ಐದು ವರ್ಷದ ಬಾಲಕಿಯ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ POCSO ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿತನು ಅಪರಿಚಿತನಾಗಿದ್ದರಿಂದ, ಆರೋಪಿತನ ಪತ್ತೆಗೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದ್ದು, ಹಲವಾರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಆರೋಪಿತನ ಮಾಹಿತಿಯನ್ನು ಸಾರ್ವಜನಿಕರಿಗೂ ಪ್ರಚಾರಪಡಿಸಲಾಗಿತ್ತು. ಸಾರ್ವಜನಿಕರ ಸಹಾಯ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಸತತ ಪ್ರಯತ್ನದಿಂದ ಭಾನುವಾರ ಆರೋಪಿಯನ್ನು ಶ್ರೀಕೃಷ್ಣ ಮಠದ ಪರಿಸರದ ವಾದೀರಾಜ 3ನೇ ಕ್ರಾಸ್ ಬಳಿ ಪತ್ತೆ ಮಾಡಲಾಗಿದೆ.
ಆರೋಪಿತನು ಉಡುಪಿಯಲ್ಲಿ ಯಾವುದೇ ವಿಳಾಸವನ್ನು ಹೊಂದದೆ ಅಲೆಮಾರಿಯಾಗಿದ್ದನು.