ಉಡುಪಿ: ಕುಡಿಯುವ ನೀರು ಕಾಮಗಾರಿ ತುರ್ತು ಮುಗಿಸಿ – ವಿನಯ ಕುಮಾರ್ ಸೊರಕೆ

Spread the love

ಉಡುಪಿ :- ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತೆಲೆದೋರದಂತೆ, ಕುಡಿಯುವ ನೀರು ಸರಬರಾಜು ಮಾಡುವ ಕುರಿತು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಮುಗಿಸಿ, ನೀರಿನ ಸಮಸ್ಯೆ ಕಂಡುಬರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಸೂಚಿಸಿದ್ದಾರೆ.
ಅವರು ಶುಕ್ರವಾರ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಹಾಗೂ ನಿವೇಶನ ಹಂಚಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬಂದ ಕಾಪು ವಿಧಾನ ಸಭಾ ವ್ಯಾಪ್ತಿಯಲ್ಲಿನ 29 ಸ್ಥಳಗಳನ್ನು ಗುರುತಿಸಿ, ಆ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಾಗಿ ಶಾಸಕರ ಕಾರ್ಯಪಡೆ ಯೋಜನೆಯಲ್ಲಿ ಕೈಗೊಂಡಿರುವ 40 ಲಕ್ಷ ರೂ ವೆಚ್ಚದ ಕಾಮಗಾರಿಗಳನ್ನು ಒಂದು ವಾರದೊಳೆಗೆ ಪೂರ್ಣಗೊಳಿಸುವಂತೆ ಹಾಗೂ ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೂರ್ಣಗೊಂಡ ನೀರು ಸರಬರಾಜು ಕಾಮಗಾರಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ 1604 ಬಿಪಿಎಲ್ ಪಡಿತರ ಚೀಟಿಗಳು 480 ರೂ ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಬಂದ ಕಾರಣ ರದ್ದಾಗಿದ್ದು, 9242 ಹೊಸ ಪಡಿತರ ಚೀಟಿಗಳು ಆನ್ ಲೈನ್ ನಲ್ಲಿ ಬಾಕಿ ಇದ್ದು ಶೀಘ್ರದಲ್ಲಿ ವಿತರಿಸಲಾಗುವುದು, ಅಲ್ಲದೇ ಜಿಲ್ಲೆಯಲ್ಲಿ ಇಡೀ ರಾಜ್ಯದಲ್ಲೇ ಪ್ರಥಮ ಬಾರಿಗೆ ಪಾಯಿಂಟ್ ಆಫ್ ಸೇಲ್ ಮೆಷಿನ್ ಅಳವಡಿಸಲಾಗುತ್ತಿದ್ದು, ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ವರ್ ಹೇಳಿದರು.
ಹೆಚ್ಚಿನ ವಿದ್ಯುತ್ ಬಿಲ್ ನಿಂದ ರದ್ದಾಗಿರುವ ಬಿಪಿಎಲ್ ಕುಟುಂಬಗಳಿಂದ ಪುನರ್ ಪರಿಶೀಲನಾ ಅರ್ಜಿಗಳನ್ನು ಪಡೆದು, ಪುನರ್ ವಿಮರ್ಶೆ ಮಾಡಿ ಕಾರ್ಡ್ ನೀಡುವಂತೆ ಸೂಚಿಸಿದ ಸಚಿವರು, ಎಲ್ಲಾ ಗ್ರಾಮ ಪಂಚಾಯತ್ ಪಿಡಿಓ ಗಳು ಈ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ವಸತಿ ಯೋಜನೆಗಳಿಗೆ ಸಂಬಂದಪಟ್ಟಂತೆ ಏಕ ಗವಾಕ್ಷಿ ಯೋಜನೆ ಮೂಲಕ ಅಗತ್ಯವಿರುವ ಎಲ್ಲಾ ಅನುಮತಿ ಗಳನ್ನು ನೀಡಿ, ವಸತಿ ರಹಿತರಿಗೆ ಶೀಘ್ರದಲ್ಲಿ ನಿವೇಶನಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿಯೇ ನಿರ್ಧರಿಸಿ, ಆಯ್ಕೆಗೊಂಡವರ ಪಟ್ಟಿಯನ್ನು ಪಂಚಾಯತ್‍ನ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಹಾಗೂ ಕಂದಾಯ ನಿರೀಕ್ಷಕರಿಗೆ ಪಟ್ಟಿಯನ್ನು ಕಳುಹಿಸಿ ಅನುಮೋದನೆ ಪಡೆಯಬಾರದೆಂದು ಸೂಚಿಸಿದರು.
ಕರಾವಳಿ ಭಾಗದ ಗ್ರಾಮ ಪಂಚಾಯತ್ ಗಳಲ್ಲಿ ನಿವೇಶನ ನೀಡಲು ಜಾಗ ಇಲ್ಲದಿದ್ದಲ್ಲಿ ಸಮೀಪದ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ನೀಡುವಂತೆ ಹಾಗೂ ನಿವೇಶನ ಕೋರಿ ಹೊಸ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚಿಸಿದ ಸಚಿವರು ಪಡುಬಿದ್ರೆಯಲ್ಲಿ ಕೊರಗ ಜನಾಂಗದವರಿಗೆ ಮಂಜೂರಾಗಿರುವ ನಿವೇಶನಗಳನ್ನು ಆದಷ್ಟು ಶೀಘ್ರದಲ್ಲಿ ಅವರಿಗೆ ಒದಗಿಸುವಂತೆ ಹಾಗೂ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ಸೂಚಿಸಿದರು.
ಎಲ್ಲಾ ಗ್ರಾಮ ಪಂಚಾಯತ್ ಪಿಡಿಓ ಗಳು ತಮ್ಮ ಗ್ರಾಮ ವ್ಯಾಪ್ತಿಯ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.
ಉಡುಪಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಜನಾರ್ಧನ ಉಪಸ್ಥಿತರಿದ್ದರು.


Spread the love