ಉಡುಪಿ: ಗೋ ಪಾಲನೆಗೆ ಹೆಸರಾದ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರಥಮ ಬಾರಿಗೆ ಎಂಬಂತೆ 2 ಕುದುರೆಗಳು ಸೇರ್ಪಡೆಯಾಗಿದ್ದು, ಉಡುಪಿ ಮೂಲದ ಚೆನೈಯಲ್ಲಿ ಉದ್ಯಮಿಯಾಗಿರುವ ಬಾಲಕೃಷ್ಣ ಭಟ್ ಎಂಬವರು ರಂಗ (4 ವರ್ಷ) ಮತ್ತು ವಿಠಲ (2 ವರ್ಷ) ಗಂಡು ಕುದುರೆಗಳನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರಿಗೆ ದಾನವಾಗಿ ನೀಡಿದ್ದಾರೆ.
ಪೇಜಾವರ ಶ್ರೀಗಳು ಮತ್ತು ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರೊಂದಿಗೆ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಚೆನೈಗೆ ಹೋಗಿದ್ದಾಗ ಆತಿಥೇಯರಾಗಿದ್ದ ಬಾಲಕೃಷ್ಣ ಭಟ್ ಅವರ ಗೋಶಾಲೆ ಮತ್ತು ಅಶ್ವಶಾಲೆಯನ್ನು ಕಂಡು ಪ್ರಭಾವಿತರಾಗಿದ್ದರು. ಆಗ ಬಾಲಕೃಷ್ಣ ಭಟ್ ಅವರು 2 ಕುದುರೆಗಳನ್ನು ನೀಡುವುದಾಗಿ ಹೇಳಿದ್ದರು. ಅದರಂತೆ ಈ 2 ಕುದುರೆಗಳು ಮಂಗಳವಾರ ಕೃಷ್ಣಕ್ಕೆ ವಾಹನದಲ್ಲಿ ತಂದೊಪ್ಪಿಸಲಾಗಿದೆ.
ಈ ಕುದುರೆಗಳನ್ನು ಕೃಷ್ಣ ಮಠದ ಮಹಾದ್ವಾರದಲ್ಲಿ ಪೇಜಾವರ ಮಠದ ಉಭಯ ಶ್ರೀಗಳು ಆರತಿ ಎತ್ತಿ, ಹುಲ್ಲು, ಬಾಳೆಹಣ್ಣು ತಿನ್ನಿಸಿ ಬರಮಾಡಿಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು, ಕೃಷ್ಣಮಠದ ಉತ್ಸಾವಾಧಿಗಳ ಸಂದರ್ಭದಲ್ಲಿ ಈ ಕುದುರೆಗಳನ್ನು ಬಳಸಿಕೊಳ್ಳಲಾಗುವುದು. ಕೃಷ್ಣನ ಅವತಾರಗಳಲ್ಲಿ ಹಯಗ್ರೀವವೂ ಒಂದು, ಈ ಹಿನ್ನೆಲೆಯಲ್ಲಿ ಈ ಹಯ (ಕುದುರೆ)ಗಳು ಕೃಷ್ಣ ಮಠದ ಶೋಭೆಯನ್ನು ಹೆಚ್ಚಿಸಲಿವೆ ಎಂದವರು ಸಂತಸ ವ್ಯಕ್ತಪಡಿಸಿದರು.
ಈ ಕುದುರೆಗಳನ್ನು ಚೆನೈಯಲ್ಲಿ ಗೌರಿ ಶಂಕರ ಎಂಬವರು ತರಬೇತುಗೊಳಿಸಿದ್ದಾರೆ, ಅವರಿಂದ ಉಡುಪಿಯ ಕೃಷ್ಣ ಎಂಬವರು ಚೆನೈಗೆ ತೆರಳಿ ವಿಶೇಷ ತರಬೇತು ಪಡೆದುಕೊಂಡು ಬಂದಿದ್ದು,ಇಲ್ಲಿ ಈ 2 ಕುದುರೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.