Home Mangalorean News Kannada News ಉಡುಪಿ: ಕೊರಗ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ರೂಪಿಸಿ: ಸೊರಕೆ ಸೂಚನೆ

ಉಡುಪಿ: ಕೊರಗ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ರೂಪಿಸಿ: ಸೊರಕೆ ಸೂಚನೆ

Spread the love

ಉಡುಪಿ: ಕೊರಗ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮುದಾಯದ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ .

ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಜನಾಂಗದವರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚೆಗೆ ವಾಲ್ಮೀಕಿ ಜಯಂತಿಯಂದು ಕೊರಗ ಸಂಘದ ಪ್ರತಿಭಟನೆ ನಿಲ್ಲಿಸುವಂತೆ ಕೋರಿದ ಮನವಿಗೆ ಸ್ಪಂದಿಸಿ ನಮ್ಮೊಂದಿಗೆ ಸಹಕರಿಸಿದ್ದೀರಿ. ನಿಮ್ಮ ಬೇಡಿಕೆಯಂತೆ ಈ ಸಭೆಯನ್ನು ಕರೆಯಲಾಗಿದೆ. ವಿಚಾರ ವಿಮರ್ಶೆಯಾಗಿದೆ. 27.4.2015ರಂದು ಸಭೆಯನ್ನು ನಡೆಸಿದ್ದೇನೆ. ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ನಿಮ್ಮ ಪರವಾಗಿ ಬಂದಿದ್ದೇನೆ ಎಂದು ಸಚಿವರು ಹೇಳಿದರು.

ಮೂಲನಿವಾಸಿ ಅಭಿವೃದ್ದಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಖರೀದಿಸಿರುವ 4 ವಾಹನಗಳನ್ನು ಕೊರಗ ಸಮುದಾಯದ ಆರೋಗ್ಯ ವ್ಯವಸ್ಥೆಗೆ ಮಾತ್ರ ಬಳಸುವಂತೆ ಮತ್ತು ಪ್ರತಿ ತಿಂಗಳು ಈ ವಾಹನದಿಂದ ಪ್ರಯೋಜನ ಪಡೆದ ಕೊರಗ ಜನಾಂಗದವರ ವಿವರಗಳನ್ನು ನೀಡುವಂತೆ ಕೋರಿದ ಸಮುದಾಯದ ಮುಖಂಡರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ ಸಚಿವರು, ಈ ಕುರಿತು ವಾಹನ ನೀಡಿರುವ ಪ್ರತಿ ಪಿಹೆಚ್‍ಸಿ ಯಿಂದ ವರದಿಯನ್ನು ಪಡೆದು, ವಿವರಗಳನ್ನು ಸಮುದಾಯದ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೂಲನಿವಾಸಿ ಅಭಿವೃದ್ದಿ ಯೋಜನೆಯಡಿ ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆ ಬಗ್ಗೆ ಅದರಲ್ಲೂ ಮುಖ್ಯವಾಗಿ ಶಿಕ್ಷಣ, ಆರೋಗ್ಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸವಿವರ ಚರ್ಚೆ ನಡೆಯಿತು.

ಐಟಿಡಿಪಿ ಇಲಾಖೆಯಿಂದ ಕೊರಗ ಆರೋಗ್ಯಕ್ಕಾಗಿ ಮೀಸಲಿಟ್ಟ ಹಣವನ್ನು ಸದ್ಬಳಕೆ ಮಾಡಿಕೊಂಡ ರೀತಿಯನ್ನು ಐಟಿಡಿಪಿ ಅಧಿಕಾರಿಗಳು ವಿವರಿಸಿದರು. ಸಮುದಾಯದ ಏಳಿಗೆಗಾಗಿ ಅಗತ್ಯವಿರುವ ಉಪಕರಣಗಳನ್ನು ಇಲಾಖೆಯಿಂದ ಡಿಜಿಎಸ್ ರೇಟ್ ನಲ್ಲಿ ಖರೀದಿಸಿದ್ದು, ಇದರ ಉದ್ದೇಶವೂ ಕೊರಗರ ಆರೋಗ್ಯವೇ , ಹಾಗೂ ಕುಗ್ರಾಮ ಪ್ರದೇಶಗಳಾದ ಶಾನಾಡಿ, ಹೊಸ್ಮಠ, ಸ್ಫೂರ್ತಿಧಾಮ, ಅಲಗದ್ದೆಕೇರೆ, ಹಕ್ಲಾಡಿಗುಡ್ಡೆ, ವಕ್ವಾಡಿ, ಆಸೋಡು ಮುಂತಾದ ಗ್ರಾಮಗಳಿಗೆ ಆರೋಗ್ಯ ವ್ಯವಸ್ಥೆಗಾಗಿ ರೂಪಿಸಲಾಗಿದೆ ಎಂದು ಹೇಳಿದರು.

ಆದರೆ ಸುಶಿಲ ನಾಡ ಮಾತನಾಡಿ, ಆರೋಗ್ಯ ವೆಚ್ಚದಲ್ಲಿ ಕಡಿತಗೊಂಡಿದೆ ಎಂದು ಅಭಿಪ್ರಾಯ ಮಂಡಿಸಿದರು. ಆದರೆ ಜಿಲ್ಲಾಧಿಕಾರಿಗಳು ಮಾತನಾಡಿ, ವೈದ್ಯಕೀಯ ವೆಚ್ಚ ಮರುಪಾವತಿಗಾಗಿ 40 ಲಕ್ಷ ರೂ.ಗಳನ್ನು ವೆಚ್ಚಮಾಡಲಾಗಿದೆ. 24 ಲಕ್ಷ ಇನ್ನೂ ಆರೋಗ್ಯ ವೆಚ್ಚಕ್ಕಾಗಿ ಇದೆ. ಇವರಿಗೋಸ್ಕರ ಜಿಲ್ಲೆಯಲ್ಲಿ ಒಟ್ಟು 28 ಕೋಟಿ ರೂ.ಗಳಿದ್ದು, ಈ ವೆಚ್ಚವನ್ನು ಸದ್ಬಳಕೆ ಮಾಡಲು ಸಮುದಾಯ ಆರೋಗ್ಯವನ್ನು ಗಮನದಲ್ಲಿರಿಸಿ ಅವರ ಸಮಗ್ರ ಅಭಿವೃದ್ಧಿಗೆ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.

ಆರೋಗ್ಯ ಭತ್ಯೆ ನಿಮಗೆ ನೀಡಲಾಗುತ್ತದೆ. ಎಂಪೆನಲ್ ಆದ ಆಸ್ಪತ್ರೆಗಳನ್ನು ಗುರುತಿಸಿ ನೀವು ಹೇಳಿದಂತೆ ಆರೋಗ್ಯ ಸೇವೆ ನೀಡಲು ಆಡಳಿತ ಬದ್ಧವಾಗಿದೆ ಹಾಗೂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಸಲಹೆ ಮಾಡಿದರು.

ಶಿಕ್ಷಕರ ಕೊರತೆಯ ಬಗ್ಗೆಯೂ ಸಮುದಾಯದ ಪ್ರತಿನಿಧಿಗಳು ಗಮನ ಸೆಳೆದಾಗ ಈ ಬಗ್ಗೆಯೂ ಜಿಲ್ಲಾಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ವಿವರಿಸಿದರು. ಆದರೆ ಸಮುದಾಯದವರ ಬೇಡಿಕೆ ಆರೋಗ್ಯ ಮಾತ್ರ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡುವ ಕ್ರಮವಾಗಬೇಕು ಎಂದು ಸೊರಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಇಒ ಎಂ ಕನಗವಲ್ಲಿ ಉಪಸ್ಥಿತರಿದ್ದರು. ಐಟಿಡಿಪಿ ಅಧಿಕಾರಿ ಎಚ್ ಎಸ್ ಪ್ರೇಮನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕುಂದಾಪುರ, ಸುಶೀಲ ನಾಡ,ಗೌರಿ ಕೆಂಬೂರು, ಅಶೋಕ್ ಶೆಟ್ಟಿ ಸಂಯೋಜಕರು ಸಮಗ್ರ ಗ್ರಾಮೀಣ ಆಶ್ರಮ, ಕಾಪು, ಶಶಿಕಲಾ ಸಚ್ಚರಿಪೇಟೆ, ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version